ರಾಜ್‌ಕೋಟ್(ಗುಜರಾತ್):ರಾಜ್‌ಕೋಟ್‌ನ ನಾನಾ ಮೌವಾ ರಸ್ತೆಯಲ್ಲಿರುವ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ತಲುಪಿದೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ದುರಂತದ ತನಿಖೆಗಾಗಿ ಸುಭಾಷ್ ತ್ರಿವೇದಿ ಅಧ್ಯಕ್ಷತೆಯಲ್ಲಿ ಎಸ್‌ಐಟಿ ರಚಿಸಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳಿಂದ ವಿವರ ಪಡೆದರು.
ಗೇಮಿಂಗ್ ಝೋನ್ ಪ್ರದೇಶಕ್ಕೆ ಗೃಹ ಸಚಿವ ಹರ್ಷ್ ಸಾಂಘ್ವಿ, ಪೊಲೀಸ್ ಆಯುಕ್ತ ರಾಜು ಭಾರ್ಗವ, ಮಹಾನಗರ ಪಾಲಿಕೆ ಆಯುಕ್ತ ಆನಂದ್ ಪಟೇಲ್, ಉಪ ಮಹಾನಗರ ಪಾಲಿಕೆ ಆಯುಕ್ತ ಸ್ವಪ್ನಿಲ್ ಖರೆ, ಮುಖ್ಯ ಅಗ್ನಿಶಾಮಕ ಅಧಿಕಾರಿ ಇಲೇಶ್ ಖೇರ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಾಂಘ್ವಿ, "ಅಗ್ನಿ ಅವಘಡದಲ್ಲಿ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಮಕ್ಕಳೂ ಇದ್ದಾರೆ. ತನಿಖೆಗೆ ಎಸ್‌ಐಟಿ ರಚಿಸಲಾಗಿದೆ'' ಎಂದು ತಿಳಿಸಿದರು.