ರಾಜ್‌ಕೋಟ್(ಗುಜರಾತ್):ಇಲ್ಲಿನ ಗೇಮ್ ಝೋನ್ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 32 ಕ್ಕೆ ಏರಿದೆ. ಭೀಕರ ಅಗ್ನಿ ಜ್ವಾಲೆಗೆ ದೇಹಗಳು ಸುಟ್ಟು ಕರಕಲಾಗಿದ್ದು, ಗುರುತಿಸುವುದೂ ಕಷ್ಟವಾಗಿದೆ. ಹೀಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ಮೊರೆ ಹೋಗಲಾಗಿದೆ.
ಅಗ್ನಿಕಾಂಡದಲ್ಲಿ ತೀವ್ರ ಬೆಂದು ಹೋಗಿರುವ ಶವಗಳು ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಎಫ್ಎಸ್ಎಲ್ ಮೂಲಕ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ. ಮಂಗಳವಾರ ಬಂದ ವರದಿಯಲ್ಲಿ ಒಬ್ಬ ಪುರುಷ ಮತ್ತು ಮೂವರು ಮಹಿಳೆಯರ ಡಿಎನ್ಎ ಅವರ ಕುಟುಂಬಸ್ಥರ ಡಿಎನ್ಎಗೆ ಸರಿ ಹೊಂದಿದ್ದು, ಗುರುತು ಪತ್ತೆಯಾಗಿದೆ. ಇನ್ನಷ್ಟು ಶವಗಳ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು, ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 32ಕ್ಕೆ ಏರಿದೆ. ಎಫ್ಎಸ್ಎಲ್ ಮೂಲಕ ಶವಗಳ ಗುರುತು ಪತ್ತೆ ಕಾರ್ಯ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆರು ಅಧಿಕಾರಿಗಳ ಅಮಾನತು:32 ಜನರ ಸಾವಿಗೆ ಕಾರಣವಾದ ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯದಡಿ 6 ಅಧಿಕಾರಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಗುಜರಾತ್ ಸರ್ಕಾರ ಸೋಮವಾರ ಅಮಾನತುಗೊಳಿಸಿದೆ. ಇದರಲ್ಲಿ ಒಬ್ಬ ಎಂಜಿನಿಯರ್, ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಮೂವರು ಪಾಲಿಕೆ ಸಿಬ್ಬಂದಿ ಇದ್ದಾರೆ.