ಜೈಪುರ : ರಾಜಸ್ಥಾನದಲ್ಲಿ ಬಿಸಿಗಾಳಿ ಮತ್ತಷ್ಟು ತೀವ್ರವಾಗಿದ್ದು ಇಡೀ ರಾಜ್ಯ ಕಾದ ಕುಲುಮೆಯಂತಾಗಿದೆ. ಪಿಲಾನಿಯಲ್ಲಿ ಕಳೆದ 24 ಗಂಟೆಗಳಲ್ಲಿ 47.2 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ತಾಪಮಾನ ದಾಖಲಾಗಿದ್ದು, ರಾಜ್ಯದ ಬಹುತೇಕ ನಗರಗಳಲ್ಲಿ 43 ರಿಂದ 47 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮುಂದಿನ 72 ಗಂಟೆಗಳಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ತಾಪಮಾನವು 45 ರಿಂದ 48 ಡಿಗ್ರಿಗೆ ತಲುಪಲಿದೆ ಎಂದು ಇಲಾಖೆ ಎಚ್ಚರಿಸಿದೆ. ಹಲವಾರು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಹೊರಡಿಸಲಾಗಿದೆ.
"ರಾಜ್ಯದ ಕೆಲ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸರಾಸರಿಗಿಂತ 2 ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ" ಎಂದು ಜೈಪುರದ ಹವಾಮಾನ ಕೇಂದ್ರದ ನಿರ್ದೇಶಕ ಆರ್.ಎಸ್. ಶರ್ಮಾ ಹೇಳಿದರು. ರಾಜಸ್ಥಾನದಲ್ಲಿ ತೀವ್ರ ಶಾಖದ ಅಲೆಯ ಕಾರಣದಿಂದ ಮುಂದಿನ 72 ಗಂಟೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಇನ್ನೂ 2 ರಿಂದ 3 ಡಿಗ್ರಿಗಳಷ್ಟು ಹೆಚ್ಚಾಗಲಿದೆ. ಮುಂದಿನ ಐದು ದಿನಗಳಲ್ಲಿ ಕನಿಷ್ಠ ತಾಪಮಾನದ ಹೆಚ್ಚಳದಿಂದಾಗಿ ರಾತ್ರಿ ಸಮಯದಲ್ಲಿ ಬಿಸಿಗಾಳಿ ಮತ್ತೂ ಹೆಚ್ಚಾಗಲಿದೆ ಎಂದು ಅವರು ಹೇಳಿದರು.
"ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಬಹುತೇಕ ಸ್ಥಳಗಳಲ್ಲಿ ಶಾಖದ ಅಲೆ ಮತ್ತು ಕೆಲ ಸ್ಥಳಗಳಲ್ಲಿ ತೀವ್ರ ಶಾಖದ ಅಲೆ ಬೀಸುವ ಸಾಧ್ಯತೆಯಿದೆ. ಮೇ 23 - 24 ರಂದು ಗರಿಷ್ಠ ತಾಪಮಾನವು 45 ರಿಂದ 48 ಡಿಗ್ರಿ ವ್ಯಾಪ್ತಿಯನ್ನು ತಲುಪುವ ಬಲವಾದ ಸಾಧ್ಯತೆಯಿದೆ ಮತ್ತು ಜೋಧಪುರ, ಬಿಕಾನೇರ್, ಜೈಪುರ, ಕೋಟಾ ಮತ್ತು ಭರತ್ ಪುರ ವಿಭಾಗಗಳ ಕೆಲವು ಭಾಗಗಳಿಗೆ ತೀವ್ರ ಶಾಖ ತರಂಗ ಅಪ್ಪಳಿಸುವ ಸಾಧ್ಯತೆಯಿದೆ." ಎಂದು ಅವರು ಮಾಹಿತಿ ನೀಡಿದರು.