ಜೈಪುರ: ಓಪನ್ ಜೀಪ್ನಲ್ಲಿ ರೀಲ್ಸ್ ವಿಡಿಯೋ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ರಾಜಸ್ಥಾನ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಪ್ರೇಮಚಂದ್ ಬೈರವ್ ಅವರ ಪುತ್ರನಿಗೆ ಸಾರಿಗೆ ಇಲಾಖೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದೆ.
ಪ್ರಭಾವಿಗಳ ಪುತ್ರರು ಓಪನ್ ಜೀಪ್ನಲ್ಲಿ ಸಂಚರಿಸುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು, ಡಿಸಿಎಂ ಪುತ್ರ ಚಿನ್ಮಯ್ ಬೈರವ್ಗೆ 7 ಸಾವಿರ ರೂ. ದಂಡ ಹಾಕಿದೆ. ಡ್ರೈವಿಂಗ್ ವೇಳೆ ಸೀಟ್ ಬೆಲ್ಟ್ ಹಾಕದಿರುವುದು ಮತ್ತು ಮೊಬೈಲ್ ಬಳಸಿದ್ದು ಸೇರಿ ಹಲವು ಸಂಚಾರ ನಿಯಮ ಉಲ್ಲಂಘಿಸಿದಕ್ಕೆ ದಂಡ ವಿಧಿಸಿ ಸಾರಿಗೆ ಇಲಾಖೆಯ ಇನ್ಸ್ಪೆಕ್ಟರ್ ಪ್ರಭು ದಯಾಲ್ ಸೋನಿ ಅವರು ಚಲನ್ ನೀಡಿದ್ದಾರೆ. ಡಿಸಿಎಂ ಮತ್ತು ಸಾರಿಗೆ ಇಲಾಖೆಯನ್ನೂ ನಿರ್ವಹಿಸುತ್ತಿರುವ ಪ್ರೇಮಚಂದ್ ಬೈರವ್ ಅವರ ನಿವಾಸಕ್ಕೆ ದಂಡದ ಚಲನ್ ಅನ್ನು ಸಾರಿಗೆ ಇಲಾಖೆ ತಲುಪಿಸಿದೆ.
ಕಾಂಗ್ರೆಸ್ ಮುಖಂಡನ ಪುತ್ರನ ಜೀಪ್ನಲ್ಲಿ ರೀಲ್ಸ್: ಡಿಸಿಎಂ ಪ್ರೇಮಚಂದ್ ಬೈರವ್ ಅವರ ಪುತ್ರ ಚಿನ್ಮಯ್ ಬೈರವ್ ಅವರಿದ್ದ ಓಪನ್ ಜೀಪ್ನಲ್ಲಿ ಕಾಂಗ್ರೆಸ್ ನಾಯಕ ಪುಷ್ಪೇಂದ್ರ ಭಾರದ್ವಾಜ್ ಅವರ ಪುತ್ರ ಕಾರ್ತಿಕೇಯ ಮತ್ತು ಇಬ್ಬರು ಸ್ನೇಹಿತರು ಕೂಡ ಇದ್ದರು. ಕಾರ್ತಿಕೇಯ್ ಭಾರದ್ವಾಜ್ ಅವರು ಈ ಜೀಪ್ ಮಾಲೀಕರಾಗಿದ್ದರಿಂದ, ಅವರಿಗೂ ನೋಟಿಸ್ ನೀಡಲಾಗಿದೆ.