ಕರ್ನಾಲ್ (ಹರಿಯಾಣ):ಹರಿಯಾಣದ ಕರ್ನಾಲ್‌ನಲ್ಲಿ ಮಂಗಳವಾರ ಬೆಳಗ್ಗೆ ರೈಲು ಅಪಘಾತ ಸಂಭವಿಸಿದೆ. ತರವಾಡಿ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಸುಮಾರು 10 ಕಂಟೈನರ್‌ಗಳು ಬೇರ್ಪಟ್ಟು ಹಳಿಯ ಮೇಲೆಯೇ ಉರುಳಿ ಬಿದ್ದಿವೆ ಎಂದು ವರದಿಯಾಗಿದೆ. ಈ ಕಂಟೈನರ್‌ಗಳು ಸುಮಾರು 1 ಕಿಲೋ ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿವೆ.
ಕಂಟೈನರ್ ಬೀಳುತ್ತಿರುವುದನ್ನು ಅರಿತ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕಂಟೈನರ್ ಬಿದ್ದಿದ್ದರಿಂದ ವಿದ್ಯುತ್ ತಂತಿಗಳು ಹಾಗೂ ರೈಲು ಹಳಿಗಳಿಗೆ ಹಾನಿಯಾಗಿದೆ.
ಕರ್ನಾಲ್‌ನ ಮಾರ್ಗದಲ್ಲಿ ರೈಲು ಸಂಚಾರ ಬಂದ್: ದೆಹಲಿ ಮತ್ತು ಅಮೃತಸರ ನಡುವೆ ಚಲಿಸುವ ರೈಲುಗಳ ಕಾರ್ಯಾಚರಣೆಯನ್ನು ರೈಲ್ವೆ ಅಧಿಕಾರಿಗಳು ನಿಲ್ಲಿಸಿದ್ದಾರೆ. ಗೂಡ್ಸ್ ರೈಲು ಚಂಡೀಗಢದಿಂದ ದೆಹಲಿ ಕಡೆಗೆ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ರೈಲು ಕರ್ನಾಲ್‌ನ ತರವಾಡಿ ರೈಲು ನಿಲ್ದಾಣಕ್ಕೆ ಬಂದಾಗ ಏಕಾಏಕಿ ಚಲಿಸುತ್ತಿದ್ದ ರೈಲಿನಿಂದ 10 ಕಂಟೈನರ್ ಹಳಿ ಮೇಲೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ. ಇದರಿಂದಾಗಿ ಎರಡೂ ಬದಿಯ ರೈಲು ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ರೈಲ್ವೆ ಪೊಲೀಸ್ ಅಧಿಕಾರಿಗಳು ಮತ್ತು ನೌಕರರು ಸ್ಥಳಕ್ಕೆ ಆಗಮಿಸಿದರು.