ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಪ್ರತಿಪಕ್ಷದ ನಾಯಕನನ್ನಾಗಿ I.N.D.I.A ಆಯ್ಕೆ ಮಾಡಿದೆ. ಈ ಬಗ್ಗೆ ಹಂಗಾಮಿ ಸ್ಪೀಕರ್‌ಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ.ವೇಣುಗೋಪಾಲ್, ರಾಹುಲ್ ಗಾಂಧಿ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈ ಬಗ್ಗೆ ಹಂಗಾಮಿ ಸ್ಪೀಕರ್‌ಗೆ ಪತ್ರ ಬರೆದಿದ್ದು, ರಾಹುಲ್ರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲು ಕೋರಲಾಗಿದೆ ಎಂದು ತಿಳಿಸಿದ್ದಾರೆ.
ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಸಾಮಾನ್ಯ ಜನರ ಧ್ವನಿಯಾಗಲಿದ್ದಾರೆ. ಎನ್ಡಿಎ ಸರ್ಕಾರ ಲೋಪದೋಷಗಳನ್ನು ಎತ್ತಿ ಹಿಡಿಯುವಲ್ಲಿ ಸಫಲರಾಗಲಿದ್ದಾರೆ. ಸರ್ಕಾರ ಸರಿಯಾದ ಹಾದಿಯಲ್ಲಿ ಸಾಗುವಂತೆ ಕಾವಲುಗಾರರಾಗಿ ಇರಲಿದ್ದಾರೆ ಎಂಬ ವಿಶ್ವಾಸವಿದೆ ಎಂಬ ಮಾತುಗಳುಳ್ಳ ವಿಡಿಯೋವನ್ನು 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಯ್ಬರೇಲಿ ಸಂಸದರಾಗಿರುವ ರಾಹುಲ್ ಗಾಂಧಿ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧರಿಸಿತ್ತು. ಆದರೆ, ಇದನ್ನು ಸ್ವತಃ ರಾಹುಲ್ ಅವರೇ ಒಪ್ಪಿಕೊಂಡಿರಲಿಲ್ಲ. ನಾಯಕರ ಮನವಿ ಮೇರೆಗೆ ಇದೀಗ ಹೊಣೆಗಾರಿಕೆ ಹೊರಲು ಸಜ್ಜಾಗಿದ್ದಾರೆ. 18ನೇ ಲೋಕಸಭೆಯ ಸ್ಪೀಕರ್ ಆಯ್ಕೆಗೂ ಮೊದಲು ಪ್ರತಿಪಕ್ಷ ನಾಯಕನ ಘೋಷಣೆಯಾಗಿದೆ.
ಇದನ್ನೂ ಓದಿ:18ನೇ ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಚುನಾವಣೆ: ಎನ್‌ಡಿಎಯಿಂದ ಓಂ ಬಿರ್ಲಾ, ಇಂಡಿಯಾ ಒಕ್ಕೂಟದಿಂದ ಕೆ. ಸುರೇಶ್ ಕಣಕ್ಕೆ - Election for the post of Speaker