ಬಾಲಸೋರ್ (ಒಡಿಶಾ) :ಪ್ರಜಾಪ್ರಭುತ್ವ ಮತ್ತು ದೇಶದ ಸಂವಿಧಾನವನ್ನು ನಾಶಮಾಡಲು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಒಂದಾಗಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭದ್ರಕ್ ಲೋಕಸಭಾ ಕ್ಷೇತ್ರದ ಸಿಮುಲಿಯಾದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭೂಮಿಯ ಮೇಲಿನ ಯಾವ ಶಕ್ತಿಯೂ ನಮ್ಮ ಸಂವಿಧಾನವನ್ನು ನಾಶಮಾಡಲು ಸಾಧ್ಯವಿಲ್ಲ. ನಿಮ್ಮ ಎಲ್ಲ ಶಕ್ತಿಗಳನ್ನು ಬಳಸಿಕೊಂಡು ನೀವು ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ ಎಂದಿರುವ ಅವರು, ಭಾರತದ ಸಂವಿಧಾನ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಬಿಜೆಪಿ ಸಂವಿಧಾನವನ್ನು ಅಂತ್ಯಗೊಳಿಸಲು ಬಯಸುತ್ತಿದೆ. ನಮ್ಮ ಸಂವಿಧಾನವನ್ನು ನಾಶಮಾಡುವ ಶಕ್ತಿ ಜಗತ್ತಿನಲ್ಲಿ ಯಾರಿಗೂ ಇಲ್ಲ. ಅವರು ಏನೇ ಮಾಡಿದರೂ ಸಂವಿಧಾನವನ್ನು ತೊಲಗಿಸಲು ಸಾಧ್ಯವಿಲ್ಲ. ಜಗನ್ನಾಥ ದೇವರನ್ನು ಅವಮಾನಿಸುವಷ್ಟು ದುರಹಂಕಾರ ಬಿಜೆಪಿಗಿದೆ. ಜಗನ್ನಾಥ ದೇವರು ಇದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ, ರ್‍ಯಾಲಿಯಲ್ಲಿ ಬಿಜೆಡಿ ಮತ್ತು ಬಿಜೆಪಿ ಸರ್ಕಾರಗಳೆರಡರ ವಿರುದ್ಧವೂ ಹರಿಹಾಯ್ದರು. ಬಿಜೆಪಿ ಮತ್ತು ಬಿಜೆಡಿ ಎರಡೂ ಒಂದೇ ವಿಚಾರಗಳನ್ನು ಹೊಂದಿವೆ. ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿರುವುದರಿಂದ ನನ್ನ ಮೇಲೆ 24 ಪ್ರಕರಣಗಳಿವೆ. ಅವರು ನನ್ನನ್ನು ಜೈಲಿಗೆ ಕಳುಹಿಸಿದ್ದಾರೆ. ಸಿಎಂ ನವೀನ್ ಪಟ್ನಾಯಕ್ ಬಿಜೆಪಿ ವಿರುದ್ಧ ಹೋರಾಡುತ್ತಿದ್ದರೆ ಅವರ ವಿರುದ್ಧ ಏಕೆ ಕೇಸ್ ಹಾಕಿಲ್ಲ. ನಾವು ಮೋದಿ - ನವೀನ್ ಪಾಲುದಾರಿಕೆಯನ್ನು ಮುರಿದು ಎಸೆಯಲು ಬಯಸುತ್ತೇವೆ ಎಂದು ಗುಡುಗಿದ್ದಾರೆ.