ಗುವಾಹಟಿ (ಅಸ್ಸೋಂ) :ಭಾರತ್ ಜೋಡೋ ನ್ಯಾಯ ಯಾತ್ರೆಯು ಗುವಾಹಟಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ದಾಂಧಲೆ ನಡೆಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಅವರನ್ನು ಲೋಕಸಭೆ ಚುನಾವಣೆಯ ಬಳಿಕ ಬಂಧಿಸಲಾಗುವುದು ಎಂದು ಅಸ್ಸೋಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಬುಧವಾರ ಹೇಳಿದರು.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ, ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಹಿಂಸಾಚಾರಕ್ಕೆ ರಾಹುಲ್ ಗಾಂಧಿ ಪ್ರಚೋದನೆ ನೀಡಿದ್ದಾರೆ ಎಂಬುದು ಆರೋಪದಲ್ಲಿದೆ. ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನಿತರ ಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣವನ್ನು ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೀಡಲಾಗಿದೆ. ದೇಶದಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಎಲೆಕ್ಷನ್ ನಂತರ ಅವರನ್ನು (ಗಾಂಧಿ) ಬಂಧಿಸಲಾಗುವುದು ಎಂದು ಶರ್ಮಾ ತಿಳಿಸಿದರು.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಸಿಐಡಿ) ರಚಿಸುವ ಎಸ್‌ಐಟಿ ಮೂಲಕ ಸಮಗ್ರ ತನಿಖೆಗಾಗಿ ಪ್ರಕರಣವನ್ನು ಅಸ್ಸೋಂ ಸಿಐಡಿಗೆ ವರ್ಗಾಯಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಜಿ ಪಿ ಸಿಂಗ್ ಹೇಳಿದ್ದಾರೆ.
ಘಟನೆಯ ಹಿನ್ನೆಲೆ:ಜನವರಿ 23 ರಂದು ಭಾರತ್ ಜೋಡೋ ನ್ಯಾಯ ಯಾತ್ರೆಯು ನಿರ್ಬಂಧಿತ ಪ್ರದೇಶದಲ್ಲಿ ಸಾಗಿ ಬರುತ್ತಿದ್ದಾಗ, ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಕಿತ್ತು ಹಾಕಿದ್ದಾರೆ. ಕಾನೂನು ಉಲ್ಲಂಘನೆಯ ಆರೋಪದ ಮೇಲೆ ಪೊಲೀಸರು ರಾಹುಲ್ ಗಾಂಧಿ ಮತ್ತು ಇತರ ಹಲವು ನಾಯಕರ ವಿರುದ್ಧ ಹಿಂಸಾಚಾರ ಉದ್ದೇಶಿತ ಕೃತ್ಯಗಳ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಯಾತ್ರೆಯು ಗುವಾಹಟಿ ನಗರಕ್ಕೆ ನುಗ್ಗುವ ಯತ್ನದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ಜನರನ್ನು ಪ್ರಚೋದಿಸಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಸಿಎಂ ಶರ್ಮಾ ಸೂಚಿಸಿದ್ದರು. ಕಾಂಗ್ರೆಸ್ ರಾಜ್ಯಾಧ್ಯಕ್ಷ ಭೂಪೇನ್ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಘಟನೆಯಲ್ಲಿ ಕಾಂಗ್ರೆಸ್ನ ಓರ್ವ ನಾಯಕ ಮತ್ತು ನಾಲ್ವರು ಪೊಲೀಸರು ಗಾಯಗೊಂಡಿದ್ದರು.
ಹಿಮಂತ ಭ್ರಷ್ಟ ಸಿಎಂ - ರಾಹುಲ್:ಗುವಾಹಟಿ ಪ್ರವೇಶಿಸದಂತೆ ತಡೆವೊಡ್ಡಿರುವ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದ ರಾಹುಲ್ ಗಾಂಧಿ, ರಸ್ತೆಯು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಬಜರಂಗ ದಳದವರಿಗೆ ಮಾತ್ರವೇ ಸೇರಿದೆಯೇ?, ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ. ಕಾನೂನನ್ನು ಅಲ್ಲ. ನಮ್ಮನ್ನು ದುರ್ಬಲರು ಎಂದು ಭಾವಿಸಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಇದೇ ವೇಳೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಭ್ರಷ್ಟ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ನ್ಯಾಯ ಯಾತ್ರೆ: ಗುವಾಹಟಿ ಪ್ರವೇಶಕ್ಕಿಲ್ಲ ಅನುಮತಿ, ಘರ್ಷಣೆ - ರಾಹುಲ್ ವಿರುದ್ಧ ಕೇಸ್ಗೆ ಸೂಚನೆ