ಪುಣೆ:ಸ್ವಾತಂತ್ರ ವೀರ ಸಾವರ್ಕರ್ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪುಣೆ ಸೆಷನ್ಸ್ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ರಾಹುಲ್ ಗಾಂಧಿ ಅವರು 2023 ಮಾರ್ಚ್ 5ರಂದು ಲಂಡನ್ನಲ್ಲಿ ಸಾವರ್ಕರ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. 2023 ಏಪ್ರಿಲ್ನಲ್ಲಿ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಅವರು ಈ ಬಗ್ಗೆ ಮೊಕದ್ದಮೆ ಹೂಡಿದ್ದರು. ಇದೀಗ ಆಗಸ್ಟ್ 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಕೋರ್ಟ್ ಸಮನ್ಸ್ ನೀಡಿದೆ.
ಈ ಬಗ್ಗೆ ವಕೀಲ ಸಂಗ್ರಾಮ್ ಕೋಲಾಟ್ಕರ್ ಮಾತನಾಡಿ, "ಕಳೆದ ವರ್ಷ ಲಂಡನ್ನಲ್ಲಿ ಸ್ವಾತಂತ್ರ ಹೋರಾಟಗಾರ ಸಾವರ್ಕರ್ ಅವರ ಬಗ್ಗೆ ರಾಹುಲ್ ಗಾಂಧಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಾವರ್ಕರ್ ಹಾಗೂ ಅವರ ಸ್ನೇಹಿತರು ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಥಳಿಸುತ್ತಿದ್ದರು. ಆಗ ಸಾವರ್ಕರ್ ಖುಷಿಯಾಗಿದ್ದರು ಎಂದು ರಾಹುಲ್ ಗಾಂಧಿ ಭಾಷಣದ ವೇಳೆ ಹೇಳಿದ್ದರು. ಈ ಬಗ್ಗೆ ಸೆಕ್ಷನ್ 209ರ ಅಡಿಯಲ್ಲಿ ಪುಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 19 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪುಣೆ ಸೆಷನ್ಸ್ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿದೆ" ಎಂದು ಕೋಲಾಟ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ಭೂಮಿ ಮೇಲಿನ ಯಾವ ಶಕ್ತಿಯಿಂದಲೂ ನಮ್ಮ ಸಂವಿಧಾನ ನಾಶಮಾಡಲು ಸಾಧ್ಯವಿಲ್ಲ: ರಾಹುಲ್ ಗಾಂಧಿ - Rahul Gandhi