ನವದೆಹಲಿ:ಬಿಜೆಬಿ ನೇತೃತ್ವದ ಕೇಂದ್ರ ಸರ್ಕಾರದ ಲ್ಯಾಟರಲ್ ಎಂಟ್ರಿ ಕ್ರಮದ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಈ ಕ್ರಮದ ಮೂಲಕವಾಗಿ ದಲಿತರು, ಒಬಿಸಿ ಮತ್ತು ಆದಿವಾಸಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.
'ಲ್ಯಾಟರಲ್ ಎಂಟ್ರಿ ಎಂಬುದು ದಲಿತರು, ಒಬಿಸಿ ಮತ್ತು ಆದಿವಾಸಿಗಳ ಮೇಲಿನ ದಾಳಿಯಾಗಿದೆ. ಬಿಜೆಪಿ ಸಂವಿಧಾನವನ್ನು ನಾಶ ಮಾಡುತ್ತಿದ್ದು, ಬಹುಜನರಿಂದ ಮೀಸಲಾತಿಯನ್ನು ಕಿತ್ತುಕೊಳ್ಳುತ್ತಿದೆ' ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಕ್ಕು ಕಸಿಯುವ ಯತ್ನ: ಸರ್ಕಾರವು ಲ್ಯಾಟರಲ್ ಪ್ರವೇಶಾತಿ ಮೂಲಕವಾಗಿ ಸಾರ್ವಜನಿಕ ಸೇವಕರ ನೇಮಕಾತಿಗೆ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ತೋರಿದ್ದು, ಸರ್ಕಾರದ ಈ ನಡೆಯನ್ನು ದೇಶ ವಿರೋಧಿ ನಡೆ ಎಂದು ಟೀಕಿಸಿದ್ದಾರೆ. ಅಲ್ಲದೇ, ಇಂತಹ ಕ್ರಮದ ಮೂಲಕ ಪ.ಜಾ, ಪ.ಪಂ ಮತ್ತು ಒಬಿಸಿಗಳ ಮೀಸಲಾತಿ ಹಕ್ಕನ್ನು ಮುಕ್ತವಾಗಿ ಕಸಿದುಕೊಳ್ಳಲಾಗುತ್ತಿದೆ.
ಕೇಂದ್ರ ಲೋಕ ಸೇವಾ ಆಯೋಗದ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಮೂಲಕ ಸಾರ್ವಜನಿಕ ಸೇವಾ ಅಧಿಕಾರಿಗಳ ನೇಮಕಾತಿ ನಡೆಸುತ್ತಿದೆ. ಈ ಮೂಲಕ ಸಂವಿಧಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಾಗ್ದಾಳಿಗೆ ಕಾರಣ: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯದ ಉಪ ಕಾರ್ಯದರ್ಶಿ, ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರಂತಹ ಪ್ರಮುಖ ಹುದ್ದೆಗೆ 45 ತಜ್ಞರನ್ನು ನೇಮಿಸುವ ಕ್ರಮದ ಹಿನ್ನಲೆ ರಾಹುಲ್ ಗಾಂಧಿ ಈ ದಾಳಿ ನಡೆಸಿದ್ದಾರೆ. ಸಾಮಾನ್ಯವಾಗಿ ಇಂತಹ ಅಧಿಕಾರಕ್ಕೆ ಅಖಿಲ ಭಾರತ ಸೇವೆಗಳಾದ ಐಎಎಸ್ (ಭಾರತೀಯ ಆಡಳಿತಾತ್ಮಕ ಸೇವೆ), ಐಪಿಎಸ್ (ಭಾರತೀಯ ಪೊಲೀಸ್ ಸೇವೆ ಮತ್ತು ಐಎಫ್ಒಎಸ್ (ಭಾರತೀಯ ಅರಣ್ಯ ಸೇವೆ)ಯಂತಹ ಗ್ರೂಪ್ ಎ ಅಧಿಕಾರಿಗಳನ್ನು ನೇಮಿಸಲಾಗುವುದು.