ವಯನಾಡ್ (ಕೇರಳ):"ರಾಜಕೀಯದಲ್ಲಿ ಪ್ರೀತಿ, ವಾತ್ಸಲ್ಯಕ್ಕೆ ಬೆಲೆ ಇಲ್ಲ ಎಂದು ಭಾವಿಸಿದ್ದೆ. ಆದರೆ, ಭಾರತ್ ಜೋಡೋ ಪಾದಯಾತ್ರೆ, ವಯನಾಡ್ ಚುನಾವಣಾ ಗೆಲುವು ನನ್ನಲ್ಲಿ ನಿಜವಾದ 'ಪ್ರೀತಿ'ಯನ್ನು ತುಂಬಿತು". ಇದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪ್ರೀತಿ ಬಗೆಗಿನ ಅಭಿಪ್ರಾಯ.
ಕೇರಳದ ವಯನಾಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಹೋದರಿ ಪ್ರಿಯಾಂಕಾ ವಾದ್ರಾ ಅವರ ಪರವಾಗಿ ಮತಪ್ರಚಾರ ನಡೆಸಿದ ರಾಹುಲ್ ಗಾಂಧಿ ಅವರು ವಯನಾಡಿನ ಜನರ ಪ್ರೀತಿ ಎಂಥದ್ದು, ನಾನ್ಯಾಕೆ ಅವರನ್ನು ಇಷ್ಟು ಗಾಢವಾಗಿ ಇಷ್ಟಪಡುವೆ ಎಂಬುದನ್ನು ಬಿಚ್ಚಿಟ್ಟರು.
ಅದು ಪಾದಯಾತ್ರೆಯಲ್ಲ, ಪ್ರೀತಿಯ ಜಾತ್ರೆ:ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ತಾವು ನಡೆಸಿದ ಪಾದಯಾತ್ರೆಯಲ್ಲಿನ ಅನುಭವಗಳನ್ನು ಹಂಚಿಕೊಂಡು ವಿಪಕ್ಷ ನಾಯಕ, ನಾನು ಮೊದಲು ರಾಜಕೀಯಕ್ಕಾಗಿ ಭಾರತ್ ಜೋಡೋ ಯಾತ್ರೆ ಆರಂಭಿಸಿದೆ. ಯಾತ್ರೆ ಮುಂದುವರಿದಂತೆಲ್ಲಾ ಬದಲಾವಣೆಗಳು ಕಂಡುಬಂದವು. ಕೊನೆಯಲ್ಲಿ ನನಗೆ ಜನರ 'ಪ್ರೀತಿ'ಯ ದರ್ಶನವಾಯಿತು. ನಾನು ಅಂದು ನಡೆಸಿದ್ದು ಬರೀ ಪಾದಯಾತ್ರೆಯಲ್ಲ, ಪ್ರೀತಿಯ ಜಾತ್ರೆ ಎಂದು ಬಣ್ಣಿಸಿದರು.
ಯಾತ್ರೆಯಲ್ಲಿ ನಾನು ಜನರನ್ನು ತಬ್ಬಿಕೊಂಡು 'ಐ ಲವ್ ಯೂ' ಎನ್ನುತ್ತಿದ್ದೆ. ಅದಕ್ಕೆ ಅವರು ಪ್ರತಿಯಾಗಿ 'ವಿ ಲವ್ ಯೂ' ಎನ್ನುತ್ತಿದ್ದರು. ಇಂದು ನಾನು ವಿಮಾನದಲ್ಲಿ ಬರುವಾಗ ರಾಜಕೀಯದಲ್ಲಿ ನಾವು ಪ್ರೀತಿಯನ್ನೇ ಬಳಸಿಲ್ಲವಲ್ಲ ಎಂಬುದು ಅರಿವಿಗೆ ಬಂತು ಎಂದು ರಾಹುಲ್ ಹೇಳಿದರು.
ಐ ಲವ್ ವಯನಾಡ್:ವಯನಾಡಿನ ಬಗ್ಗೆ ತಮಗಿರುವ ಪ್ರೀತಿಯನ್ನು ಪದಗಳಲ್ಲಿ ಪೋಣಿಸಿ ಅರುಹಿದ ರಾಹುಲ್ ಗಾಂಧಿ, "ದ್ವೇಷ ಮತ್ತು ಕೋಪವನ್ನು ಎದುರಿಸುವ ಏಕೈಕ ಅಸ್ತ್ರವೆಂದರೆ ಅದು ಪ್ರೀತಿ ಮತ್ತು ವಾತ್ಸಲ್ಯ. ಅದನ್ನು ನಾನು ವಯನಾಡಿನ ಜನರಿಂದ ಕಲಿತಿದ್ದೇನೆ. ನೀವು ನೀಡಿದ ಪ್ರೀತಿಯೇ ಇಂದು ನನಗೆ ಬಲವಾದ ಆಯುಧವಾಗಿದೆ ಎಂದರು.