ನಲ್ಬರಿ(ಅಸ್ಸಾಂ):ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿರುವ ಆಕಾಂಕ್ಷಿಯೊಬ್ಬರ ಮಹತ್ತರ ಕೋರಿಕೆಯನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಈಡೇರಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಹೇಗಿರುತ್ತದೆ ಎಂದು ಖುದ್ದಾಗಿ ತಿಳಿಯುವ ಬಯಕೆ ಹೊಂದಿದ್ದ ವ್ಯಕ್ತಿಗೆ 'ಒಂದು ದಿನದ ಜಿಲ್ಲಾಧಿಕಾರಿ'ಯಾಗಿ ಕಾರ್ಯನಿರ್ವಹಣೆ ಮಾಡಲು ಅವಕಾಶ ನೀಡಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರಾಗಿರುವ ಮೃಣ್ಮೊಯ್ ಕಲಿತಾ ಎಂಬವರು ಐಎಎಸ್ ಆಕಾಂಕ್ಷಿಯಾಗಿದ್ದಾರೆ. ಸದ್ಯ ಅವರು ಫುಲೋಗುರಿಯಲ್ಲಿರುವ ಅಸ್ಸಾಮಿ ಮಾಧ್ಯಮದ ಜಾತಿಯ ವಿದ್ಯಾಲಯದಲ್ಲಿ ವಿಜ್ಞಾನ ಬೋಧಕರಾಗಿದ್ದಾರೆ. ತಾವು ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿಯಾಗಿ, ಆ ಹುದ್ದೆಯ ಹೊಣೆ ನಿಭಾಯಿಸುವ ಬಯಕೆ ಹೊಂದಿದ್ದಾಗಿ ಸಿಎಂಗೆ ಪತ್ರ ಬರೆದಿದ್ದರು.
ಇದನ್ನು ಮನ್ನಿಸಿರುವ ಸಿಎಂ ಶರ್ಮಾ ಅವರು, ಮೃಣೋಯ್ ಅವರಿಗೆ ದಿನದ ಮಟ್ಟಿಗೆ ಡಿಸಿಯಾಗಿ ಕಾರ್ಯಭಾರ ಮಾಡುವ ಅವಕಾಶ ನೀಡಿದ್ದಾರೆ. ಅದರಂತೆ, ಡಿಸೆಂಬರ್ 6ರಂದು ಡಿಸಿ ಕಚೇರಿಯ ಭೂಸ್ವಾಧೀನ, ಆಹಾರ ಮತ್ತು ನಾಗರಿಕ ಸರಬರಾಜು, ಕಂದಾಯ ಮತ್ತು ಅಬಕಾರಿ ಸೇರಿದಂತೆ ಅನೇಕ ಇಲಾಖೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿಯ ಕೆಲಸವನ್ನು ಅವಲೋಕಿಸಿದ್ದಾರೆ.
ಜಿಲ್ಲಾಧಿಕಾರಿಗಳು ಸಾರ್ವಜನಿಕರೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ. ಅವರ ದುಃಖ ದುಮ್ಮಾನಗಳನ್ನು ಹೇಗೆ ಆಲಿಸುತ್ತಾರೆ ಎಂಬುದನ್ನೂ ಅಣಕು ಸಂವಹನ ಮೂಲಕ ಅರಿತುಕೊಂಡಿದ್ದಾರೆ. ಇಲಾಖಾ ಪರಿಶೀಲನೆ ನಡೆಸುವ ಮೂಲಕ ಜಿಲ್ಲಾಧಿಕಾರಿ ಪಾತ್ರ ಏನು ಎಂಬ ಅನುಭವವನ್ನು ಪಡೆದುಕೊಂಡಿದ್ದಾರೆ.
ಬಳಿಕ ಮಾತನಾಡಿದ ಮೃಣೋಯ್ ಕಲಿತಾ, "ಸರ್ಕಾರಿ ಅಧಿಕಾರಿಯಾಗಬೇಕೆಂಬುದು ನನ್ನ ಕನಸು. ಬೋಧನೆಯ ಜೊತೆಗೆ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಅದರಲ್ಲೂ ಐಎಎಸ್ ಪಾಸ್ ಆಗಿ ಜಿಲ್ಲಾಧಿಕಾರಿ ಹುದ್ದೆ ಪಡೆಯುವ ಮಹದಾಸೆ ಇದೆ. ಅದಕ್ಕಾಗಿ ಡಿಸಿ ಅವರ ಕೆಲಸ ಒತ್ತಡ, ಕಾರ್ಯಭಾರ ಹೇಗಿರುತ್ತದೆ ಎಂಬುದನ್ನು ಅರಿಯಲು ಸಿಎಂ ಬಳಿ ಅವಕಾಶ ಕೋರಿದ್ದೆ. ಇದಕ್ಕೆ ಸ್ಪಂದಿಸಿ ದಿನದ ಮಟ್ಟಿಗೆ ಡಿಸಿಯನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳು" ಎಂದಿದ್ದಾರೆ.
"ಇಂತಹ ಅದ್ಭುತ ಅವಕಾಶ ಸಿಕ್ಕಿದ್ದಕ್ಕೆ ರೋಮಾಂಚನಗೊಂಡಿದ್ದೇನೆ. ಇಲ್ಲಿನ ಸಿಬ್ಬಂದಿ ಅತ್ಯಂತ ಸಹಕಾರ ನೀಡಿದ್ದಾರೆ. ಜಿಲ್ಲಾಧಿಕಾರಿ ದೇಕಾ, ಹೆಚ್ಚುವರಿ ಜಿಲ್ಲಾಧಿಕಾರಿ ರುಣಭ್ ರಾಮ್‌ಚಿಯಾರಿ ಮತ್ತು ಇತರ ನೌಕರರು ನನಗೆ ಸಾಕಷ್ಟು ಸಹಾಯ ಮಾಡಿದರು. ಕಠಿಣ ಪರಿಶ್ರಮ ಪಟ್ಟು ಜಿಲ್ಲಾಧಿಕಾರಿ ಹುದ್ದೆ ಪಡೆಯುವೆ" ಎಂದು ಈಟಿವಿ ಭಾರತ್‌ಗೆ ತಿಳಿಸಿದರು.
ಇದನ್ನೂ ಓದಿ:ಕಾರ್ಡಿನಲ್ ಆಗಿ ದೀಕ್ಷೆ ಪಡೆದ ಕೇರಳದ ಜಾರ್ಜ್ ಕೂವಕಾಡ್: ಶುಭ ಕೋರಿದ ಪ್ರಧಾನಿ ಮೋದಿ