ತರ್ನ್ ತರನ್ (ಪಂಜಾಬ್):ಯುವತಿಯೊಂದಿಗೆ ಮಗ ಓಡಿ ಹೋಗಿ ಮದುವೆಯಾದ ಕಾರಣಕ್ಕೆ ಆತನ 55 ವರ್ಷದ ತಾಯಿ ಮೇಲೆ ಹಲ್ಲೆ ಮಾಡಿ, ಅರೆಬೆತ್ತಲೆಯಾಗಿ ಮೆರವಣಿಗೆ ನಡೆಸಿರುವ ಘಟನೆ ಅಮಾನವೀಯ ಘಟನೆ ಪಂಜಾಬ್ನ ತರ್ನ್ ತರನ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಕೆಲ ದಿನಗಳ ಸಂತ್ರಸ್ತೆಯ ಮಗ ಯುವತಿಯೊಬ್ಬಳ ಜೊತೆಗೆ ಓಡಿಹೋಗಿದ್ದ. ಈ ಯುವತಿಯ ಕುಟುಂಬಸ್ಥರ ವಿರೋಧದ ನಡುವೆಯೇ ಆಕೆಯನ್ನು ಮದುವೆಯಾಗಿದ್ದ. ಆದ್ದರಿಂದ ಯುವತಿ ಕುಟುಂಬ ಸದಸ್ಯರು ಮಾರ್ಚ್ 31ರಂದು ಯುವಕ ತಾಯಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣಾಧಿಕಾರಿ ಸುನೀತಾ ಬಾವಾ ಮಾಹಿತಿ ನೀಡಿದ್ದು, ಈ ಘಟನೆ ಕುರಿತು ಸಂತ್ರಸ್ತೆ ದೂರು ನೀಡಿದ್ದಾರೆ. ಈ ದೂರಿನ ಪ್ರಕಾರ, ಸಂತ್ರಸ್ತೆ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯ ಮಗನ ಅತ್ತೆ-ಮಾವನ ಕಡೆಯವರು ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲ, ಆಕೆಯನ್ನು ಅರೆಬೆತ್ತಲೆ ಸ್ಥಿತಿಯಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಸಂತ್ರಸ್ತೆಯನ್ನು ಪರೇಡ್ ನಡೆಸುತ್ತಿರುವ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ ಎಂದು ತಿಳಿಸಿದರು.