ಚಂಡೀಗಢ:ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಮಾನ್ಯತೆ ನೀಡಬೇಕು ಎಂದು ಕೋರಿ ಪಂಜಾಬ್ ಮತ್ತು ಹರಿಯಾಣ ರೈತರು ನಡೆಸುತ್ತಿರುವ 'ದಿಲ್ಲಿ ಚಲೋ' ಹೋರಾಟದಲ್ಲಿ ರೈತ ಮೃತಪಟ್ಟ 7 ದಿನಗಳ ನಂತರ ಪಂಜಾಬ್ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ.
ಈ ಸಾವಿಗೆ ನ್ಯಾಯ ಸಿಗಬೇಕು ಎಂದು ರೈತರು ಪಂಜಾಬ್ ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಹೋರಾಟದಲ್ಲಾದ ಸಾವು ಸಾಮಾನ್ಯ ಎಂದು ಪರಿಗಣಿಸಬಾರದು ರೈತರು ಆಗ್ರಹಿಸಿದ್ದರು. ಮೃತ ರೈತನ ತಂದೆ ನೀಡಿದ ದೂರಿನ ಮೇರೆಗೆ ಪಂಜಾಬ್ ಪೊಲೀಸರು ಪಟಿಯಾಲಾದ ಪತ್ರಾನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 114 (ಅಪರಾಧ ನಡೆದಾಗ ಹಾಜರಿರುವವರು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ರೈತ ಮೃತಪಟ್ಟ ಬಳಿಕ ಕೊಲೆ ಕೇಸ್ ದಾಖಲಿಸುವವರೆಗೆ ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಕ್ರಿಯೆ ಮಾಡಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಇದರಿಂದ 7 ದಿನ ಕಳೆದರೂ ಕಳೆಬರಹವನ್ನು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇದೀಗ ಎಫ್ಐಆರ್ ದಾಖಲಾಗಿದ್ದು, ಇಂದು ರೈತನ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ:ಖನೌರಿ ಗಡಿಯಲ್ಲಿ ಪ್ರತಿಭಟನೆ ವೇಳೆ ರೈತರು ಮತ್ತು ಹರಿಯಾಣ ಪೊಲೀಸ್ ಸಿಬ್ಬಂದಿಯ ನಡುವಿನ ಘರ್ಷಣೆಯಲ್ಲಿ ಯುವ ರೈತ ಶುಭಕರನ್ ಸಿಂಗ್(21)ಎಂಬಾತ ಸಾವನ್ನಪ್ಪಿದ್ದ. 12 ಮಂದಿ ಪೊಲೀಸರೂ ಗಾಯಗೊಂಡಿದ್ದರು. ಘರ್ಷಣೆಯಲ್ಲಿ ಪೊಲೀಸ್ ದಾಳಿಗೆ ಸಾವು ಸಂಭವಿಸಿದೆ ಎಂದು ರೈತರು ಆರೋಪಿಸಿದ್ದರು. ಇದನ್ನು ಕೊಲೆ ಕೇಸ್ ಎಂದು ಪರಿಗಣಿಸಲು ರೈತರು ಪಟ್ಟು ಹಿಡಿದಿದ್ದರು.