ಚಂಡೀಗಢ: ಪಂಚಾಯತ್ ಚುನಾವಣೆಯ ಹೊತ್ತಿನಲ್ಲಿ ಪಂಜಾಬ್ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುನಿಲ್ ಜಾಖರ್ ರಾಜೀನಾಮೆ ನೀಡಿದ್ದಾರೆ. ಆದರೆ, ಹೈಕಮಾಂಡ್ ಇನ್ನೂ ಅವರ ರಾಜೀನಾಮೆ ಅಂಗೀಕರಿಸಿಲ್ಲ.
ನಾಯಕತ್ವದಲ್ಲಿ ಮೂಡಿದ ಭಿನ್ನಾಭಿಪ್ರಾಯದಿಂದ ಅವರು ರಾಜ್ಯ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ದಿನಗಳಿಂದ ಪಕ್ಷದ ಚಟುವಟಿಕೆ ಮತ್ತು ಪ್ರಮುಖ ಸಭೆಗಳಿಗೆ ಜಾಖರ್ ಗೈರಾಗಿದ್ದರು. ಈ ಬೆಳವಣಿಗೆ ಅವರು ಹುದ್ದೆ ತೊರೆಯುವ ಮುನ್ಸೂಚನೆ ನೀಡಿತ್ತು.
ಗುರುವಾರ ಚಂಡೀಗಢದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೂ ಜಾಖರ್ ಗೈರಾಗಿದ್ದರು. ಸೆಪ್ಟಂಬರ್ 3ರಂದು ಕಡೇಯದಾಗಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಲೂಧಿಯಾನ ಬಿಜೆಪಿ ನಾಯಕ ರಣವೀತ್ ಬಿಟ್ಟು ಅವರಿಗೆ ನೀಡುತ್ತಿರುವ ಪ್ರಾಮುಖ್ಯತೆ ಜಾಖರ್ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ, ಕಳೆದ ಜುಲೈನಿಂದಲೇ ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು ಎಂದು ತಿಳಿದು ಬಂದಿದೆ.
ಈ ನಡುವೆ ಡಿಸೆಂಬರ್ನಲ್ಲಿ ನಡೆಯಲಿರುವ ಚುನಾವಣೆಯವರೆಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಜಾಖರ್ಗೆ ಬಿಜೆಪಿ ಸಲಹೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸುನಿಲ್ ಜಾಖರ್ ಅವರ ತಂದೆ ಬಲ್ರಾಮ್ ಜಾಖರ್ ಕಾಂಗ್ರೆಸ್ ನಾಯಕರಾಗಿದ್ದರು. ಲೋಕಸಭಾ ಸ್ಪೀಕರ್ ಮತ್ತು ಮಧ್ಯ ಪ್ರದೇಶ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದರು. ಲೋಕಸಭೆಯಲ್ಲಿ ದೀರ್ಘಾವಧಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ಕೀರ್ತಿಯೂ ಇವರಿಗಿದೆ.
ಸುನಿಲ್ ಜಾಖರ್ 2022ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಟಿಕೆಟ್ ಪಡೆದು ಅದೊಹರ್ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಗುರುದಾಸ್ಪುರ್ ಉಪಚುನಾವಣೆಯಲ್ಲಿ ಗೆದ್ದು 2022ರಲ್ಲಿ ಸಂಸತ್ ಪ್ರವೇಶಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ನಿಂದ ನೋಟಿಸ್ ಪಡೆದ ಅವರು ಅದೇ ವರ್ಷ ಕಾಂಗ್ರೆಸ್ಗೆ ವಿದಾಯ ಹೇಳಿದ್ದರು. 2022ರಲ್ಲಿ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷ ಸೇರಿದ ಅವರು, 2024 ಜುಲೈ 4ರಂದು ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.
ಇದನ್ನೂ ಓದಿ: ಸಂಸದೀಯ ಸ್ಥಾಯಿ ಸಮಿತಿಗಳ ರಚನೆ: ರಕ್ಷಣಾ ಸಮಿತಿಯಲ್ಲಿ ರಾಹುಲ್ ಗಾಂಧಿ