ಪುಣೆ (ಮಹಾರಾಷ್ಟ್ರ): ಅಕ್ರಮ ಮಾದಕವಸ್ತು ವಿರುದ್ಧ ಮಹಾರಾಷ್ಟ್ರದ ಪುಣೆ ಪೊಲೀಸರು ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದು, ಸರಿಸುಮಾರು 1,100 ಕೋಟಿ ರೂಪಾಯಿ ಮೌಲ್ಯದ 600 ಕೆಜಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಸೋಮವಾರ ಮೂವರು ಆರೋಪಿಗಳ ಬಂಧನದ ನಂತರ ಇಷ್ಟೊಂದು ದೊಡ್ಡ ಮೊತ್ತದ ಮಾದಕವಸ್ತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಭವ್ ಅಲಿಯಾಸ್ ಪಿಂಟ್ಯಾ ಭರತ್ ಮಾನೆ, ಅಜಯ್ ಅಮರನಾಥ್ ಕೊರ್ಸಿಯಾ ಮತ್ತು ಹೈದರ್ ಶೇಖ್ ಎಂಬುವವರೇ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಸೋಮವಾರ ಆರಂಭದಲ್ಲಿ ಪೊಲೀಸರು ಮೂವರಿಂದ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು. ನಂತರ ಈ ಆರೋಪಿಗಳನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಬೃಹತ್ ಪ್ರಮಾಣದ ಮಾದಕವಸ್ತು ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರ ನಂತರ ವಿಶ್ರಾಂತವಾಡಿಯ ಸ್ಥಳವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 55 ಕೆಜಿ ಎಂಡಿ ಡ್ರಗ್ಸ್ ಪತ್ತೆಯಾಗಿದೆ. ಅಲ್ಲಿಂದ ಮತ್ತೊಂದು ಸ್ಥಳದ ಮೇಲೆ ದಾಳಿ ಮಾಡಿದಾಗ ಅಲ್ಲಿ 550 ಕೆಜಿ ಎಂಡಿ ದೊರೆತಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಕೆಮಿಕಲ್ ಫ್ಯಾಕ್ಟರಿಯಲ್ಲಿ ಡ್ರಗ್ಸ್ ತಯಾರಿಕೆ: ಈ ಬಗ್ಗೆ ಸುದ್ದಿಗಾರರಿಗೆ ಮಂಗಳವಾರ ಮಾಹಿತಿ ನೀಡಿದ ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್, ಅಕ್ರಮ ಮಾದಕವಸ್ತುವಿಗೆ ಸಂಬಂಧಿಸಿದಂತೆ ಸೋಮವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳ ವಿಚಾರಣೆಯ ನಂತರ ವಿಶ್ರಾಂತವಾಡಿ ಪ್ರದೇಶದಲ್ಲಿ ಎರಡು ಗೋಡೌನ್‌ಗಳನ್ನು ಶೋಧಿಸಿ 55 ಕೆಜಿ ಎಂಡಿ ವಶಪಡಿಸಿಕೊಳ್ಳಲಾಗಿದೆ. ಕೆಮಿಕಲ್ ಫ್ಯಾಕ್ಟರಿಯಲ್ಲಿ ಈ ಡ್ರಗ್ಸ್ ತಯಾರಾಗುತ್ತಿತ್ತು. ಫ್ಯಾಕ್ಟರಿ ಮೇಲೆ ದಾಳಿ ಮಾಡಿದಾಗ ಅಲ್ಲಿ 550 ಕೆಜಿ ಎಂಡಿ ಜಪ್ತಿ ಮಾಡಲಾಗಿದೆ. ಇದುವರೆಗೆ ಒಟ್ಟು 1,100 ಕೋಟಿ ಮೌಲ್ಯದ 600 ಕೆಜಿ ಎಂಡಿ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮುಂದುವರೆದು ಮಾತನಾಡಿದ ಅವರು, ಈ ಕೆಮಿಕಲ್ ಫ್ಯಾಕ್ಟರಿಯು ಅನಿಲ್ ಸಾಬಲ್ ಎಂಬುವವರಿಗೆ ಸೇರಿದ್ದು, ಆತನನ್ನೂ ಬಂಧಿಸಲಾಗಿದೆ. ಸೋಮವಾರ ದಾಖಲಾದ ಪ್ರಕರಣದಲ್ಲಿ ಮಾತ್ರ ಈ ದೊಡ್ಡ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ ನಾವು ವಿವಿಧ ಭಾಗಗಳಿಗೆ ವಿವಿಧ ತಂಡಗಳನ್ನು ರವಾನಿಸಿದ್ದೇವೆ. ಡ್ರಗ್ಸ್ ಮುಕ್ತ ಪುಣೆಯೇ ಪೊಲೀಸರ ಪ್ರಥಮ ಆದ್ಯತೆಯಾಗಿದೆ. ಈ ರೀತಿ ಕಾನೂನು ಬಾಹಿರವಾಗಿ ಕೃತ್ಯಗಳಲ್ಲಿ ಯಾರೇ ಭಾಗಿಯಾಗಿದ್ದರೂ, ನಾವು ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಇದನ್ನೂ ಓದಿ:ಪುಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹100 ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶ