ಪುಣೆ(ಮಹಾರಾಷ್ಟ್ರ):ಇಲ್ಲಿಗೆ ಸಮೀಪದ ಪಿಂಪ್ರಿ ಚಿಂಚ್ ವಾಡ್ನಲ್ಲಿ ನಕಲಿ ನೋಟು ದಂಧೆಯನ್ನು ಭೇದಿಸಿದ ಪೊಲೀಸರು ಕೆಲ ದಿನಗಳ ಹಿಂದೆ ಆರು ಮಂದಿಯನ್ನು ಬಂಧಿಸಿದ್ದರು. ಈ ಆರೋಪಿಗಳು ನಕಲಿ ನೋಟು ಮುದ್ರಣಕ್ಕೆ ಕಾಗದ ಮತ್ತು ಇತರ ಕಚ್ಚಾ ವಸ್ತುಗಳನ್ನು ಚೀನಾದ ಇ-ಕಾಮರ್ಸ್ ಪೋರ್ಟಲ್ ಒಂದರಿಂದ ಖರೀದಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪಿಗಳಿಂದ 500 ರೂಪಾಯಿ ಮುಖಬೆಲೆಯ 400 ಕ್ಕೂ ಹೆಚ್ಚು ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 25 ರಂದು ಪೊಲೀಸರು ಹೃತಿಕ್ ಖಡ್ಸೆ ಎಂಬಾತನನ್ನು ಬಂಧಿಸಿ ಆತನಿಂದ 500 ರೂ ಮುಖಬೆಲೆಯ 140 ನೋಟುಗಳನ್ನು ವಶಪಡಿಸಿಕೊಂಡ ನಂತರ ಈ ದಂಧೆ ಬೆಳಕಿಗೆ ಬಂದಿದೆ. ತನಿಖೆಯ ಸಮಯದಲ್ಲಿ ನೋಟುಗಳು ನಕಲಿ ಎಂಬುದು ಅಧಿಕಾರಿಗಳಿಗೆ ತಿಳಿದು ಬಂದಿದೆ.
"ಡಿಘಿಯಲ್ಲಿ (ಪಿಂಪ್ರಿ ಚಿಂಚ್ ವಾಡ್ನಲ್ಲಿ) ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸಿರುವುದಾಗಿ ಆರೋಪಿಗಳು ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾರೆ. ಇನ್ನೂ ಐದು ಜನ ಈ ನಕಲಿ ನೋಟುಗಳ ಮುದ್ರಣ ಜಾಲದಲ್ಲಿ ಭಾಗಿಯಾಗಿರುವುದು ದಾಳಿಯ ಸಮಯದಲ್ಲಿ ಕಂಡುಬಂದಿದೆ ಮತ್ತು 500 ರೂ ಮುಖಬೆಲೆಯ 300 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪಿಂಪ್ರಿ ಚಿಂಚ್ ವಾಡ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.