ವಯನಾಡು, ಕೇರಳ: ವಯನಾಡ್ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೆ ಮುನ್ನ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ.
ಮೈಸೂರಿನಿಂದ ಸುಲ್ತಾನ್ ಬತ್ತೇರಿಗೆ ಪ್ರಯಾಣಿಸಿದ ಅವರು ಮಾಜಿ ಸೈನಿಕ ಮತ್ತು ಅವರ ಹಿರಿಯ ವಯಸ್ಸಿನ ತಾಯಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಹಿರಿಯ ವಯಸ್ಸಿನ ತಾಯಿ ಪ್ರಿಯಾಂಕಾ ಗಾಂಧಿ ಅವರನ್ನು ವೈಯಕ್ತಿಕ ಭೇಟಿ ಮಾಡುವ ಹಂಬಲವನ್ನು ಹೊಂದಿದ್ದರು. ಇದನ್ನು ಅರಿತು ಅವರು ಈ ಭೇಟಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಅವರ ಮನೆಗೆ ಭೇಟಿ ನೀಡುತ್ತಿದ್ದಂತೆ, ಪ್ರಿಯಾಂಕಾ ಗಾಂಧಿ ವಾದ್ರಾ ಹಿರಿಯ ವಯಸ್ಸಿನ ತಾಯಿ ಆಶೀರ್ವಾದ ಪಡೆದರು.
ಇಂದು ಮಧ್ಯಾಹ್ನ ನಾಮಪತ್ರ:ಇಂದು ಪ್ರಿಯಾಂಕಾ ಗಾಂಧಿ ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಬುಧವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಕ್ಷೇತ್ರದಲ್ಲಿ ಅವರು ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ.
ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ರಾಹುಲ್:ರಾಜಕೀಯ ಪುನರ್ಜನ್ಮ ನೀಡಿದ ವಯನಾಡು ಜನರೊಂದಿಗೆ ಭಾವಾನಾತ್ಮಕ ಸಂದೇಶ ಹಂಚಿಕೊಂಡಿರುವ ರಾಹುಲ್ ಗಾಂಧಿ, ವಯನಾಡಿನ ಜನರು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಅವರನ್ನು ಪ್ರತಿನಿಧಿಸಲು ನನ್ನ ಸಹೋದರಿ ಪ್ರಿಯಾಂಕಾ ಗಾಂಧಿಗಿಂತ ಬೇರೆ ಉತ್ತಮ ಅಭ್ಯರ್ಥಿಯನ್ನು ನಾನು ಊಹಿಸಲು ಸಾಧ್ಯವಿಲ್ಲ. ವಯನಾಡಿನ ಜನರ ಅಗತ್ಯ ಮತ್ತು ಸಂಸತ್ತಿನಲ್ಲಿ ಅವರ ಧ್ವನಿಯಾಗಿ ಆಕೆ ಕಾರ್ಯ ನಿರ್ವಹಿಸುತ್ತಾಳೆ ಎಂಬ ವಿಶ್ವಾಸ ನನಗೆ ಇದೆ. ಅಕ್ಟೋಬರ್ 23ರಂದು ವಯನಾಡು ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ನಾಮಪತ್ರ ಸಲ್ಲಿಸುತ್ತಿದ್ದು, ವಯನಾಡನ್ನು ಪ್ರೀತಿಯಿಂದ ಪ್ರತಿನಿಧಿಸುವುದನ್ನು ಮುಂದುವರೆಸೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಚುನಾವಣಾ ಆಯೋಗ ವಯನಾಡ್ನಲ್ಲು ಉಪಚುನಾವಣೆ ಘೋಷಣೆ ಬಳಿಕ ಕೇರಳದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಭಾಗವಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಿತು. ಮಧ್ಯಾಹ್ನ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಕೆ ವೇಳೆ ಪ್ರಿಯಾಂಕಾ ಜೊತೆ ಕಾಂಗ್ರೆಸ್ ನಾಯಕರು ಜೊತೆಗಿರಲಿದ್ದಾರೆ.
ಕಳೆದ ಐದು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇದೀಗ ವಯನಾಡು ಕ್ಷೇತ್ರದಲ್ಲಿ ಕಣಕ್ಕೆ ಇಳಿಯುವ ಮೂಲಕ ಚುನಾವಣೆಗೆ ಸ್ಪರ್ಧೆ ನಡೆಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ಮಹಾ ಚುನಾವಣೆ: ರಾತ್ರೋರಾತ್ರಿ 45 ಸದಸ್ಯರ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಏಕ್ನಾಥ್ ಶಿಂಧೆ