ನವದೆಹಲಿ: ಸುಪ್ರೀಂ ಕೋರ್ಟ್ ಅಥವಾ ನ್ಯಾಯಾಂಗ ವ್ಯವಸ್ಥೆ ಮೇಲೆ ಭಾರತದ ಜನತೆ ಎಂದು ಅಪನಂಬಿಕೆಯನ್ನು ಹೊಂದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು. ಭಾರತದ ಸರ್ವೋಚ್ಛ ನ್ಯಾಯಾಲಯದ 75ನೇ ವರ್ಷಾಚರಣೆ ಹಿನ್ನೆಲೆ ಭಾರತ್ ಮಂಟಪದಲ್ಲಿ ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವೋಚ್ಛ ನ್ಯಾಯಾಲಯದ 75ನೇ ವರ್ಷದ ಪಯಣದಲ್ಲಿ ಸಂವಿಧಾನಿಕ ಮೌಲ್ಯ ಮತ್ತು ಭಾರತ ಪ್ರಬುದ್ಧ ಪ್ರಜಾಪ್ರಭುತ್ವದಿಂದ ಹೊರಹೊಮ್ಮಿದೆ. ಜನರು ಎಂದಿಗೂ ಭಾರತದ ನ್ಯಾಯಾಂಗ ಮತ್ತು ಸುಪ್ರೀಂ ಕೋರ್ಟ್ ಅನ್ನು ಅಪನಂಬಿಕೆ ಹೊಂದಿಲ್ಲ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ತನ್ನ 75ನೇ ವರ್ಷಾಚರಣೆ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ತಾಯಿಯಾದ ಭಾರತದ ವೈಭವವನ್ನು ಹೆಚ್ಚಿಸಿದೆ. ನಾವು ಹೊಂದಿರುವ ನಂಬಿಕೆ ಮತ್ತು ಭರವಸೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ. ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲೂ ಸುಪ್ರೀಂಕೋರ್ಟ್ ಮೂಲಭೂತ ಹಕ್ಕನ್ನು ಎತ್ತಿ ಹಿಡಿದಿದೆ. ರಾಷ್ಟ್ರೀಯ ಏಕತೆ ವಿಷಯವು ರಾಷ್ಟ್ರದ ಹಿತಾಸಕ್ತಿಯಾಗಿದೆ ಎಂದರು.
ಸುಪ್ರೀಂಕೋರ್ಟ್ ಸ್ಥಾಪನೆಯಾಗಿ 75 ವರ್ಷದ ಸ್ಮರಣೆಗೆ ಇದೇ ವೇಳೆ ಪ್ರಧಾನಿ, ಅಂಚೆ ಚೀಟಿ ಮತ್ತು ನಾಣ್ಯವನ್ನು ಅನಾವರಣ ಮಾಡಿದರು. ಕಳೆದ 10 ವರ್ಷಗಳಿಂದ ನ್ಯಾಯಾಲಯದ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರವು 8 ಸಾವಿರ ಕೋಟಿ ರೂ. ವ್ಯಯಿಸಿದೆ. ನ್ಯಾಯದ ವಿಳಂಬವನ್ನು ತೊಡೆದುಹಾಕಲು ಕಳೆದೊಂದು ದಶಕದಿಂದ ಅನೇಕ ಮಟ್ಟದಲ್ಲಿ ಕಾರ್ಯ ನಿರ್ವಹಣೆ ಮಾಡಲಾಗಿದೆ ಎಂದು ತಿಳಿಸಿದರು.