ಕರ್ನಾಟಕ

karnataka

ETV Bharat / bharat

ಅಡ್ವಾಣಿಗೆ ನಿವಾಸಕ್ಕೆ ತೆರಳಿ 'ಭಾರತ ರತ್ನ' ಪ್ರಶಸ್ತಿ ಪ್ರದಾನ ರಾಷ್ಟ್ರಪತಿ ದ್ರೌಪದಿ ಮುರ್ಮು - L K Advani

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ ಅವರಿಗೆ 'ಭಾರತ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು.

ಭಾರತ ರತ್ನ ಪ್ರಶಸ್ತಿ ಪ್ರದಾನ
ಭಾರತ ರತ್ನ ಪ್ರಶಸ್ತಿ ಪ್ರದಾನ

By PTI

Published : Mar 31, 2024, 2:21 PM IST

ನವದೆಹಲಿ:ಮಾಜಿ ಉಪ ಪ್ರಧಾನಿ, ಹಿರಿಯ ಬಿಜೆಪಿ ಧುರೀಣ ಎಲ್​.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಅವರ ನಿವಾಸದಲ್ಲಿ ಇಂದು (ಭಾನುವಾರ) ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ನಿನ್ನೆ (ಶನಿವಾರ) ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅಡ್ವಾಣಿ ಗೈರಾಗಿದ್ದರು. ಹೀಗಾಗಿ ಅವರ ನಿವಾಸಕ್ಕೆ ತೆರಳಿ ಪ್ರಶಸ್ತಿ ನೀಡಲಾಯಿತು. ಈ ವೇಳೆ ಉಪ ರಾಷ್ಟ್ರಪತಿ ಜಗದೀಪ್ ಧನಖರ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಅಡ್ವಾಣಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ ಮಾಡಿದ ಚಿತ್ರಗಳನ್ನು ರಾಷ್ಟ್ರಪತಿ ಭವನದ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಅಡ್ವಾಣಿ ಅವರು 7 ದಶಕಗಳಿಗೂ ಹೆಚ್ಚು ಕಾಲ ಭಾರತದ ರಾಜಕಾರಣದಲ್ಲಿ ತೊಡಗಿಸಿಕೊಂಡು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ. 1927ರಲ್ಲಿ ಕರಾಚಿಯಲ್ಲಿ ಜನಿಸಿದ ಅವರು 1947 ರಲ್ಲಿ ದೇಶ ವಿಭಜನೆಯ ನಂತರ ಭಾರತಕ್ಕೆ ಬಂದಿದ್ದರು. ದಶಕಗಳ ಕಾಲ ದೇಶದ ಉದ್ದಗಲಕ್ಕೂ ತಿರುಗಾಡಿ ರಾಷ್ಟ್ರೀಯತೆ, ಸಾಮಾಜಿಕ, ರಾಜಕೀಯದಲ್ಲಿ ಪರಿವರ್ತನೆ ತಂದರು ಎಂದು ರಾಷ್ಟ್ರಪತಿ ಭವನ ಬಣ್ಣಿಸಿದೆ.

ರಾಮಮಂದಿರ ಹೋರಾಟದ ಮುಂದಾಳು:ತುರ್ತು ಪರಿಸ್ಥಿತಿಯ ವೇಳೆ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿ ಸಿಲುಕಿದ್ದಾಗ ಅವಿಶ್ರಾಂತ ಯೋಧನಾಗಿ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಹೋರಾಟ ನಡೆಸಿದರು. ಸಂಸದ, ಗೃಹ ಸಚಿವ, ಉಪ ಪ್ರಧಾನಿಯಾಗಿ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮೆರುಗು ತಂದಿದ್ದಾರೆ. ದೇಶದ ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಅವರ ಸುದೀರ್ಘ ಮತ್ತು ದಣಿವರಿಯದ ಹೋರಾಟವು 2024 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪುನರ್​ನಿರ್ಮಾಣ ಮೂಲಕ ಕೊನೆಗೊಂಡಿತು.

96 ವರ್ಷದ ಅಡ್ವಾಣಿ ಜೂನ್ 2002 ರಿಂದ ಮೇ 2004 ರವರೆಗೆ ಉಪ ಪ್ರಧಾನ ಮಂತ್ರಿಯಾಗಿ ಮತ್ತು ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1986 ರಿಂದ 1990 ರವರೆಗೆ, 1993 ರಿಂದ 1998 ಮತ್ತು 2004 ರಿಂದ 2005 ರವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದರು.

ಮಾರ್ಚ್​ 30ರಂದು ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್ ಮತ್ತು ಚೌಧರಿ ಚರಣ್ ಸಿಂಗ್, ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ 'ಭಾರತ ರತ್ನ'ವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.

ಇದನ್ನೂ ಓದಿ:ಮಾಜಿ ಪಿಎಂ ನರಸಿಂಹರಾವ್ ಸೇರಿ ನಾಲ್ವರಿಗೆ ಮರಣೋತ್ತರ 'ಭಾರತ ರತ್ನ' ಪ್ರದಾನ ಮಾಡಿದ ರಾಷ್ಟ್ರಪತಿ - Bharat Ratna

ABOUT THE AUTHOR

...view details