ಕರ್ನಾಟಕ

karnataka

ETV Bharat / bharat

ಮಹಿಳಾ ಬೋಗಿಯಲ್ಲಿ ಗರ್ಭಿಣಿಗೆ ಲೈಂಗಿಕ ದೌರ್ಜನ್ಯ ಎಸಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಯುವಕ: ಆರೋಪಿ ಪೊಲೀಸ್​ ವಶಕ್ಕೆ - PREGNANT WOMAN SEXUALLY ASSAULTED

ಮಹಿಳಾ ಬೋಗಿಗೆ ಹತ್ತಿದ ದುಷ್ಕರ್ಮಿಯೊಬ್ಬ ಪ್ರಯಾಣಿಕ ಗರ್ಭಿಣಿಗೆ ಕಿರುಕುಳ ನೀಡಿ, ರೈಲಿನಿಂದ ತಳ್ಳಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ

pregnant-woman-sexually-assaulted-and-thrown-off-moving-train-in-vellore
ಸಾಂದರ್ಭಿಕ ಚಿತ್ರ (ಎಎನ್​ಐ)

By ETV Bharat Karnataka Team

Published : Feb 7, 2025, 1:09 PM IST

ವೆಲ್ಲೂರು, ತಮಿಳುನಾಡು:ಗರ್ಭಿಣಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಟ್ರೈನ್​ನಿಂದ ಹೊರ ತಳ್ಳಿರುವ ಆಘಾತಕಾರಿ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ವರದಿಯಾಗಿದೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸಂತ್ರಸ್ತ ಮಹಿಳೆ ಕೊಯಮತ್ತೂರಿನಿಂದ ತಿರುಪತಿಗೆ ಇಂಟರ್​​ಸಿಟಿ ಎಕ್ಸ್​ಪ್ರೆಸ್​ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಘಟನೆಯ ಹಿನ್ನೆಲೆ:ಗುರುವಾರ ರಾತ್ರಿ 9ರ ಸುಮಾರಿಗೆ ಮಹಿಳೆ ಪ್ರಯಾಣಿಸುವಾಗ ಜೊಲರ್ಪೆಟೈನಲ್ಲಿ ಮಹಿಳೆಯರ ಬೋಗಿಗೆ ಹತ್ತಿದ ಯುವಕನೊಬ್ಬ, ಮಹಿಳೆ ಒಬ್ಬರೇ ಇರುವುದನ್ನು ಗಮನಿಸಿದ್ದಾನೆ. ಈ ವೇಳೆ ಮಹಿಳೆ ಇದು ಮಹಿಳಾ ಬೋಗಿಯಾಗಿದ್ದು, ಕೆಳಗೆ ಇಳಿಯುವಂತೆ ತಿಳಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಡೆಗೆ ಆತ ಆಕೆಯ ಮೇಲೆ ದೈಹಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ.

ರಕ್ಷಣೆಗಾಗಿ ಮಹಿಳೆ ಶೌಚಾಲಯದ ಆಶ್ರಯ ಪಡೆಯಲು ಮುಂದಾಗಿದ್ದಾರೆ, ಈ ವೇಳೆ ಕೂಡ ಆತ ಹಿಂಬಾಲಿಸಿದ್ದಾನೆ. ಅಲ್ಲದೇ ರೈಲು ಬಾಗಿಲಲ್ಲಿ ನಿಂತು ವಾದ ಮುಂದುವರೆಸಿದ್ದಾನೆ. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆ ಸಹಾಯಕ್ಕೆ ಅಗಲಾಚಿದರೂ ಕರುಣೆ ತೋರದೇ ಆಕೆಯನ್ನು ಕೆವಿ ಕುಪ್ಪಂ ಬಳಿ ರೈಲಿನಿಂದ ಹೊರ ತಳ್ಳಿದ್ದಾನೆ.

ಮಹಿಳೆಯ ಮೇಲೆ ದೌರ್ಜನ್ಯ ನಡೆದಿರುವುದು ಗೊತ್ತಾಗಿದ್ದು ಹೇಗೆ?:ಈ ವೇಳೆ ದಾರಿ ಹೋಕರೊಬ್ಬರು ಮಹಿಳೆ ರೈಲ್ವೆ ಟ್ರ್ಯಾಕ್​​ ಬಳಿ ಗಾಯಗೊಂಡು ಕೆಳಕ್ಕೆ ಬಿದ್ದಿರುವುದನ್ನು ನೋಡಿ ರಕ್ಷಣೆ ಮಾಡಿದ್ದು, ಕೆವಿ ಕುಪ್ಪಂ ಪೊಲೀಸರಿಗೆ ಮತ್ತು ತುರ್ತು ಸೇವೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಕೆವಿ ಕುಪ್ಪಂ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಗಿದೆ. ರೈಲಿನಿಂದ ಕೆಳಕ್ಕೆ ಬಿದ್ದಿರುವುದರಿಂದ ಮಹಿಳೆಯ ಕೈ ಮತ್ತು ಕಾಲುಗಳು ಮುರಿದಿವೆ ಎಂದು ವೈದ್ಯರು ತಿಳಿಸಿದ್ದಾರೆ.

ತನಿಖೆಗೆ ಮುಂದಾದ ಪೊಲೀಸರು: ರೈಲ್ವೆ ಪೊಲೀಸರು ಮತ್ತು ಕೆವಿ ಕುಪ್ಪಂ ಪೊಲೀಸರು ಘಟನೆ ಸಂಬಂಧ ತನಿಖೆಗೆ ಮುಂದಾಗಿದ್ದಾರೆ. ರೈಲು ಮತ್ತು ರೈಲು ನಿಲ್ದಾಣದ ಸಿಸಿಟಿವಿ ಫೂಟೇಜ್ ಮೂಲಕ ಸಾಕ್ಷಿಗಳನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆ ಸುರಕ್ಷಿತವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಈಗ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.

ಆರೋಪಿ ವಶಕ್ಕೆ ಪಡೆದ ಪೊಲೀಸರು:ಈ ಕೃತ್ಯ ಎಸಗಿದ ಆರೋಪಿಯನ್ನು ಹೇಮರಾಜ್​ ಎಂದು ಪತ್ತೆ ಮಾಡಲಾಗಿದ್ದು, ಆತನ ವಿರುದ್ಧ ಕೊಲೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಇತರ ಅಪರಾಧದ ಮೇಲೆ ವಶಕ್ಕೆ ಪಡೆಯಲಾಗಿದೆ. ಆರೋಪಿ ಹೇಮರಾಜ್​ ಕೃತ್ಯ ಎಸಗುವ ಸಂದರ್ಭದಲ್ಲಿ ಆಲ್ಕೋಹಾಲ್​ ಅಥವಾ ಡ್ರಗ್ಸ್​ ನಶೆಯಲ್ಲಿದ್ದನಾ ಅಥವಾ ಇಲ್ಲವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಘಟನೆ ಮಹಿಳಾ ಬೋಗಿಯಲ್ಲಿ ಹೆಚ್ಚಿನ ಭದ್ರತೆ ಬೇಕು ಎಂಬುದನ್ನು ತೋರಿಸುತ್ತಿದೆ.

ಇದನ್ನೂ ಓದಿ: ಒಂದೆಡೆ ಹಸಿರು, ಮತ್ತೊಂದು ಕಡೆ ಕೃಷ್ಣೆಯ ಒಡಲು; ಮಧ್ಯದಲ್ಲೊಂದು ಬಾಹುಬಲಿ ಸೇತುವೆ: ಹೀಗಿದೆ ದೃಶ್ಯಕಾವ್ಯ!

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಕರ್ನಾಟಕದ ಇಬ್ಬರು ಸೇರಿ ನಾಲ್ವರು ಸಾವು

ABOUT THE AUTHOR

...view details