ನವದೆಹಲಿ:ದೆಹಲಿಯಲ್ಲಿ ಮತ್ತೊಂದು 'ಪ್ರೀತಿ' ಹತ್ಯೆಯಾಗಿದೆ. ಮದುವೆಗೆ ಬೇಡಿಕೆ ಇಟ್ಟಿದ್ದಕ್ಕೆ 7 ತಿಂಗಳ ಗರ್ಭಿಣಿ ಪ್ರೇಯಸಿಯನ್ನು ಪ್ರಿಯತಮ ತನ್ನ ಗೆಳೆಯರ ಜೊತೆಗೂಡಿ ಕೊಂದು ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ. ಇದೀಗ, ಯುವತಿ ನಾಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದೆಹಲಿಯ ನಂಗ್ಲೋಯ್ ಪ್ರದೇಶದ 19 ವರ್ಷದ ಯುವತಿ ಸಂಜು ಅಲಿಯಾಸ್ ಸಲೀಮ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆಕೆ 7 ತಿಂಗಳ ಗರ್ಭಿಣಿಯಾಗಿದ್ದಳು. ಹೀಗಾಗಿ ತನ್ನನ್ನು ವಿವಾಹವಾಗುವಂತೆ ಆಕೆ ಸಲೀಮ್ನನ್ನು ಕೇಳಿದ್ದಾಳೆ. ಆದರೆ, ಸಲೀಮ್ ಗರ್ಭಪಾತ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾನೆ. ಇದಕ್ಕೆ ಯುವತಿ ಒಪ್ಪಿಗೆ ನೀಡಿಲ್ಲ. ಇದೇ ವಿಚಾರ ಇಬ್ಬರ ಮಧ್ಯೆ ಆಗಾಗ್ಗೆ ಜಗಳಕ್ಕೂ ಕಾರಣವಾಗಿತ್ತು.
ಸಹಚರರ ಜೊತೆ ಸೇರಿ ಹತ್ಯೆ:ವಿವಾಹಕ್ಕೆ ಪ್ರೇಯಸಿ ಹಠ ಹಿಡಿದ ಕಾರಣ, ಆರೋಪಿ ಸಲೀಮ್ ಆಕೆಯನ್ನು ಹತ್ಯೆ ಮಾಡುವ ಸ್ಕೆಚ್ ರೂಪಿಸಿದ್ದಾನೆ. ಅದರಂತೆ, ಇಬ್ಬರು ಗೆಳೆಯರಾದ ಪಂಕಜ್ ಮತ್ತು ರಿತಿಕ್ರ ಸಹಾಯ ಕೋರಿದ್ದಾನೆ. ಅಕ್ಟೋಬರ್ 21 ರಂದು ಕರ್ವಾ ಚೌತ್ ದಿನದಂದು ಯುವತಿಯ ಜೊತೆ ಸಲೀಮ್ ಮತ್ತೆ ಕಿತ್ತಾಡಿದ್ದಾನೆ. ನಂತರ, ಆಕೆಯನ್ನು ಮನೆ ಬಿಟ್ಟು ಬರುವಂತೆ ಸೂಚಿಸಿದ್ದಾನೆ. ಇದನ್ನು ನಂಬಿದ ಪ್ರೇಯಸಿ ತನ್ನ ವಸ್ತುಗಳೊಂದಿಗೆ ಸಲೀಮ್ ಜೊತೆ ಬಂದಿದ್ದಾಳೆ.
ಸಲೀಮ್ ತನ್ನ ಸಹಚರರಾದ ಪಂಕಜ್ ಮತ್ತು ರಿತಿಕ್ ಜೊತೆಗೂಡಿ ಕಾರು ಬಾಡಿಗೆಗೆ ಪಡೆದು ಆಕೆಯನ್ನು ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಮೂವರೂ ಸೇರಿ ಆಕೆಯನ್ನು ಕೊಂದು ಶವವನ್ನು ನಾಲ್ಕು ಅಡಿ ಆಳದ ಗುಂಡಿ ತೋಡಿ ಅದರಲ್ಲಿ ಹೂತು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಹಿಂಟ್' ನೀಡಿದ 'ಕಮೆಂಟ್':ಮಗಳು ಮನೆಯಿಂದ ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ಅಕ್ಟೋಬರ್ 22 ರಂದು ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದಾಗ, ಯುವತಿಯು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಕಮೆಂಟ್ ಒಂದು ಅನುಮಾನ ತಂದಿದೆ. ಸಲೀಮ್ ಬಗ್ಗೆ ಯುವತಿಯು ತನ್ನ ಸ್ನೇಹಿತರ ಜೊತೆಯ ಚಾಟ್ನಲ್ಲಿ ಭೂತ (ghost) ಎಂದು ಜರಿದಿದ್ದಳು. ಇದರ ಆಧಾರದ ಮೇಲೆ ಪೊಲೀಸರು ಪ್ರಿಯಕರ ಸಲೀಮ್ನನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ತನಿಖಾಧಿಕಾರಿಗಳು ಸಲೀಂ ಮತ್ತು ಆತನ ಸಹಚರ ಪಂಕಜ್ನನ್ನು ಬಂಧಿಸಿ, ವಿಚಾರಿಸಿದಾಗ ಕೊಲೆಯನ್ನು ಒಪ್ಪಿಕೊಂಡಿದ್ದಾರೆ. ಮೂರನೇ ಶಂಕಿತ ರಿತಿಕ್ ಪತ್ತೆಗೆ ಹುಡುಕಾಟ ನಡೆದಿದೆ. ರೋಹ್ಟಕ್‌ನ ಮದೀನಾದಲ್ಲಿನ ನಿರ್ಜನ ಪ್ರದೇಶದಲ್ಲಿ ಯುವತಿಯ ಶವವನ್ನು ಹೊರತೆಗೆಯಲಾಗಿದೆ" ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಹೆಸರು ಬದಲಿಸಿ ಯುವತಿ ಜೊತೆ ಸಂಗ:ಮಗಳ ಹತ್ಯೆಗೆ ಸಂತ್ರಸ್ತೆಯ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. "ಕೆಲವು ತಿಂಗಳುಗಳ ಹಿಂದೆ ಆರೋಪಿ ಯುವಕನನ್ನು ಆಕೆ ಭೇಟಿಯಾಗಿದ್ದಳು. ಅವರಿಬ್ಬರೂ ಉತ್ತಮ ಸ್ನೇಹಿತರೆಂದು ಭಾವಿಸಿದ್ದೆವು. ಇದೀಗ, ಮಗಳನ್ನೇ ಹತ್ಯೆ ಮಾಡಿದ್ದಾರೆ. ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, ಆರೋಪಿ ತನ್ನ ಹೆಸರು 'ಸಲೀಮ್' ಎಂಬುದನ್ನು ಮರೆಮಾಚಿ 'ಸಂಜು' ಎಂದು ಪರಿಚಯಿಸಿಕೊಂಡಿದ್ದ. ಯುವತಿ ಸ್ನೇಹ ಬೆಳೆಸಿದಾಗಲೂ ಆತ ಇದೇ ಹೆಸರನ್ನು ಹೇಳುತ್ತಿದ್ದ ಎಂದು ಮೃತ ಯುವತಿಯ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ:'ಚುನಾವಣಾ ಸ್ಪರ್ಧೆ ಹೊಸತು, ಜನಪರ ಹೋರಾಟವಲ್ಲ': ವಯನಾಡ್ ಜನರಿಗೆ ಪ್ರಿಯಾಂಕಾ ಪತ್ರ