ಹೈದರಾಬಾದ್:18ನೇ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶ ಪ್ರಕಟವಾಗುವುದೊಂದೇ ಬಾಕಿ. ಈ ಮಧ್ಯೆ ಹಲವಾರು ಮಾಧ್ಯಮಗಳು, ವಿವಿಧ ಪೋಲ್ ಏಜೆನ್ಸಿಗಳು ಎಕ್ಸಿಟ್ ಪೋಲ್ ಅಂದಾಜು ಪ್ರಕಟ ಮಾಡಲಿವೆ. ಎಲ್ಲದರ ನಡುವೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೊಸ ಭವಿಷ್ಯ ನುಡಿದಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಸ್ವಂತ ಬಲದಿಂದ 303 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದ್ದಾರೆ. 303 ಅಥವಾ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಲಿದೆ. ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ಕೇಸರಿ ಪಕ್ಷದ ಮತಗಳ ಪ್ರಮಾಣ ಕೂಡ ಈ ಬಾರಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ 300 ಸ್ಥಾನಕ್ಕಿಂತಲೂ ಕಡಿಮೆ ಗೆಲ್ಲುತ್ತೆ:ಈ ಹಿಂದೆಯೂ ಪ್ರಶಾಂತ್ ಕಿಶೋರ್ ಅವರು, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದರು. ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಪ್ರಸ್ತುತ ಇರುವ 300 ಸ್ಥಾನಗಳನ್ನು ಬಿಜೆಪಿ ಉಳಿಸಿಕೊಳ್ಳಬಹುದು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.