ಜೈಪುರ: ರಾಜಸ್ಥಾನದ ಪಿಂಕ್ ಸಿಟಿಯಲ್ಲಿ ನಡೆಯುತ್ತಿರುವ ಜೈಪುರ ಸಾಹಿತ್ಯ ಉತ್ಸವದಲ್ಲಿ ಸುಧಾಮೂರ್ತಿ ತಮ್ಮ ಮಗಳು ಅಕ್ಷತಾ ಮೂರ್ತಿಯೊಂದಿಗೆ 'ಮೈ ಮದರ್ ಮೈಸೆಲ್ಫ್' (ನಾನು, ನನ್ನ ತಾಯಿ) ಎಂಬ ವಿಚಾರ ಕುರಿತು ಸಂಭಾಷಣೆ ನಡೆಸಿ, ಗಮನ ಸೆಳೆದರು. ವಿಶೇಷ ಎಂದರೆ, ಈ ವೇಳೆ ಸುಧಾಮೂರ್ತಿಯವರ ಅಳಿಯ, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರು ವೇದಿಕೆಯ ಕೆಳಗೆ ಕೇಳುಗರ ಆಸನದ ಮೊದಲಿನ ಸಾಲಿನಲ್ಲಿ ಕಾಣಿಸಿಕೊಂಡರು.
ಮುಕ್ತವಾಗಿ ತಾಯಿಯೊಂದಿಗೆ ಸಂಭಾಷಣೆಗಿದ ಅಕ್ಷತಾ ಮೂರ್ತಿ, ಹೇಗೆ ನೀವು ಜೀವನ ಮತ್ತು ಕಾರ್ಯವನ್ನು ಸಮತೋಲನ ನಡೆಸಿದ್ರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುಧಾಮೂರ್ತಿ, ನನ್ನ ತಂದೆ ವೈದ್ಯರಾಗಿದ್ದು, ಅವರಿಗೆ ಆಸ್ಪತ್ರೆಯೇ ದೇಗುಲವಾಗಿತ್ತು. ಕೆಲಸದ ಮೇಲಿನ ಶ್ರದ್ಧೆ ನನ್ನ ತಂದೆಯಿಂದ ಬಂದಿತು ಎಂದರು. ಇದೇ ವೇಳೆ ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕು ನಿರ್ವಹಣೆಯಲ್ಲಿ ನಾರಾಯಣ ಮೂರ್ತಿ ಅವರು ಬೆಂಬಲವಾಗಿ ನಿಂತಿದ್ದರು. ಪ್ರತಿ ಯಶಸ್ವಿ ಮಹಿಳೆ ಹಿಂದೆ ಬುದ್ಧಿವಂತ ಪುರುಷನಿರುತ್ತಾನೆ. ನನ್ನ ಪತಿ ಸದಾ ನನಗೆ ಬೆಂಬಲವಾಗಿ ನಿಂತು ಮುನ್ನಡೆಯಲು ಸಹಾಯ ಮಾಡಿದರು ಎಂದರು.
ಮಕ್ಕಳ ಬೆಳೆಸಲು ನಾನು ಉದ್ಯೋಗ ತೊರೆದೆ ಎಂದ ಸುಧಾ ಮೂರ್ತಿ, ಮಕ್ಕಳೊಂದಿಗೆ ಉತ್ತಮ ಸಮಯವನ್ನು ವಿನಿಯೋಗಿಸಿ ಎಂದು ಪೋಷಕರಿಗೆ ಸಲಹೆ ನೀಡಿದರು. ಅಲ್ಲದೇ, ಅವರಿಗೆ ನೈತಿಕ ಮೌಲ್ಯಗಳ ಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದರು.
ಇದನ್ನು ಒಪ್ಪಿದ ಅಕ್ಷತಾ ಕೂಡ ಪೋಷಕರು ಏಕಕಾಲದಲ್ಲಿ ಎರಡನ್ನು ಒಟ್ಟಿಗೆ ಮಾಡಲು ಸಾಧ್ಯವಿಲ್ಲ. ಪೋಷಕರು ಮಕ್ಕಳಿಗೆ ಆದ್ಯತೆ ನೀಡಬೇಕು ಎಂದ ಅವರು, ತಮಗೆ ಪಾಠ ಹೇಳಿ ಮಾರ್ಗ ಸೂಚಿಸಿದ ತಾಯಿಗೆ ಧನ್ಯವಾದ ತಿಳಿಸಿದರು. ನೀವು ಮತ್ತು ತಂದೆ ನನ್ನ ರೋಲ್ ಮಾಡೆಲ್. ಇಬ್ಬರು ಪರಸ್ಪರ ಬೆಂಬಲಿಸಿದ್ದಿರಿ ಎಂದು ಕೃತಜ್ಞತೆ ಸಲ್ಲಿಸಿದರು.
ಇದಕ್ಕೆ ಉತ್ತರಿಸಿದ ಸುಧಾ ಮೂರ್ತಿ, ನಾನು ನನ್ನ ಮಕ್ಕಳು ಉತ್ತಮ ನಾಗರಿಕರಾಗಬೇಕು ಎಂದು ಬಯಸಿದ್ದೆ. ನೀನು ಕೂಡ ನಿನ್ನ ಮಕ್ಕಳು ಮತ್ತು ಪತಿ ನಿನ್ನ ಬಗ್ಗೆ ಹೆಮ್ಮೆ ಪಡುವ ದಿನವನ್ನು ನೋಡುತ್ತಿಯ ಎಂದು ಹರಸಿದರು.
ಕಾರ್ಯಕ್ರಮದ ಬಳಿಕ ಸುನಕ್ ಸೇರಿದಂತೆ ನೆರೆದ ಸಭಿಕರಿಂದ ಚಪ್ಪಾಳೆಯ ಕರತಾಡನ ಕಂಡುಬಂತು. ರಾಜಸ್ಥಾನ ಮುಖ್ಯ ಕಾರ್ಯದರ್ಶಿ ಸುಂಧಾಶು ಪಂತ್ ಕೂಡ ಸಭಿಕರ ಸ್ಥಾನದಲ್ಲಿದ್ದು, ಸುನಕ್ ಅವರನ್ನು ಭೇಟಿಯಾದರು.
ತಾಯಿ ಮತ್ತು ಮಗಳ ನಡುವೆ ನಡೆದ ಈ ಸ್ವಾರಸ್ಯಕರ ಸಂಭಾಷಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಜೆಎಲ್ಎಫ್, ಜೈಪುರ ಸಾಹಿತ್ಯ ಉತ್ಸವ 2025ರಲ್ಲಿ ಅಪರೂಪದ ತಾಯಿ ಮತ್ತು ಮಗಳ ನಡುವಿನ ಚರ್ಚೆಯಲ್ಲಿ ಇಬ್ಬರು ಮಹಿಳೆಯರು ತಮ್ಮ ಜೀವನ, ತಾವು ನಡೆಸಿದ ಆಯ್ಕೆ, ತೆಗೆದುಕೊಂಡ ಮಾರ್ಗದ ಕುರಿತು ಚರ್ಚಿಸಿದರು. ಈ ಸಂಭಾಷಣೆಯು ಬುದ್ದಿವಂತಿಕೆ, ಉತ್ಸಾಹಗಳಿಂದ ಕೂಡಿತ್ತು ಎಂದು ತಿಳಿಸಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2025 ಪ್ರಮುಖ ಘೋಷಣೆಗಳು ಹೀಗಿವೆ
ಇದನ್ನೂ ಓದಿ: ಗುಡ್ ನ್ಯೂಸ್: 2025ರಲ್ಲಿ ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ: ಆರ್ಥಿಕ ಸಮೀಕ್ಷೆ ವರದಿ