ಹೈದರಾಬಾದ್:ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಲ್ಲಿ ತೆಲೆಮರೆಸಿಕೊಂಡಿದ್ದ ಬಿಆರ್ಎಸ್ನ ಮಾಜಿ ಶಾಸಕ ಶಕೀಲ್ ಪುತ್ರ ಸಾಹಿಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಹಿಲ್ ಇಂದು ಬೆಳಗ್ಗೆ ದುಬೈನಿಂದ ಹೈದರಾಬಾದ್ಗೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ಮಾಡಿದೆ. ಸದ್ಯ ಪೊಲೀಸರು ಆತನನ್ನು ಚಂಚಲಗುಡ ಜೈಲಿಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ: ಕಳೆದ ವರ್ಷ ಡಿಸೆಂಬರ್ 23 ರಂದು ಮುಂಜಾನೆ 3 ಗಂಟೆಗೆ ಹೈದರಾಬಾದ್ನ ಪ್ರಜಾ ಭವನದ ಬಳಿ ಕಾರು ಅಪಘಾತವಾಗಿತ್ತು. ಈ ವೇಳೆ ಕಾರಿನಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಪಂಜಾಗುಟ್ಟ ಠಾಣೆಗೆ ಕರೆದೊಯ್ದಿದ್ದರು. ಇದರಲ್ಲಿ ಮಾಜಿ ಶಾಸಕ ಶಕೀಲ್ ಅವರ ಪುತ್ರ ಸಾಹಿಲ್ ಕೂಡ ಇದ್ದರು. ಬಳಿಕ ಉಸಿರಾಟದ ಸಮಸ್ಯೆ ಎಂದು ಹೇಳಿ ಚಿಕಿತ್ಸೆಗೆ ತೆರಳಿದ್ದ ಸಾಹಿಲ್ ತಲೆಮರೆಸಿಕೊಂಡಿದ್ದ. ಪೊಲೀಸ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾಹಿಲ್ ತಪ್ಪಿಸಿಕೊಂಡಿದ್ದ ಎಂಬ ವಿಚಾರ ಸಿಪಿ ಶ್ರೀನಿವಾಸ್ ರೆಡ್ಡಿ ಅವರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಂತರಿಕ ತನಿಖೆಗೆ ಆದೇಶಿಸಿದ್ದರು. ಸಿಪಿ ಅವರ ಆದೇಶದಂತೆ ಪಶ್ಚಿಮ ವಲಯ ಡಿಸಿಪಿ ವಿಜಯ್ ಕುಮಾರ್ ತನಿಖೆ ನಡೆಸಿದ್ದರು.
ತನಿಖೆ ವೇಳೆ ಪ್ರಜಾಭವನದಿಂದ ಪಂಜಗುಟ್ಟ ಪೊಲೀಸ್ ಠಾಣೆವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ಅಲ್ಲದೆ ಸಾಹಿಲ್ನನ್ನು ಠಾಣೆಗೆ ಕರೆತಂದಿರುವುದೂ ಕೂಡ ಠಾಣೆಯ ಕ್ಯಾಮೆರಾಗಳಲ್ಲಿ ಪತ್ತೆಯಾಗಿತ್ತು. ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರು ಸಾಹಿಲ್ ಅವರನ್ನು ಹೊರತುಪಡಿಸಿ ಅಬ್ದುಲ್, ಆಸಿಫ್ ಎಂಬುವರನ್ನು ಆರೋಪಿಯನ್ನಾಗಿ ಸೇರಿಸಿದ್ದಾರೆ ಎಂದು ಡಿಸಿಪಿ ಮಾಹಿತಿ ಕಲೆ ಹಾಕಿದ್ದರು. ಇದನ್ನು ಆಧರಿಸಿ ಪಂಜಗುಟ್ಟ ಇನ್ಸ್ಪೆಕ್ಟರ್ ದುರ್ಗರಾವ್ ಅವರನ್ನು ಸಿಪಿ ಶ್ರೀನಿವಾಸ್ ರೆಡ್ಡಿ ಅಮಾನತುಗೊಳಿಸಿದ್ದರು. ಬಳಿಕ ಎಫ್ಐಆರ್ನಲ್ಲಿ ಸಾಹಿಲ್ ಎ1 ಆರೋಪಿಯಾಗಿ ಸೇರಿಸಿ ಲುಕೌಟ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಡಿಸಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ದೆಹಲಿಯಿಂದ ಕದ್ದ ಜೆಪಿ ನಡ್ಡಾ ಪತ್ನಿ ಕಾರು 15 ದಿನಗಳ ಬಳಿಕ ಬನಾರಸ್‌ನಲ್ಲಿ ಪತ್ತೆ: ಇಬ್ಬರ ಬಂಧನ - JP NADDA CAR RECOVERED