ನವದೆಹಲಿ:ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ದೇಶಾದ್ಯಂತ ನಡೆಸುತ್ತಿರುವ ಅಭಿಯಾನದ ರಾಯಭಾರಿಯನ್ನಾಗಿ ವಿವಾದಿತ ನಟಿ ಪೂನಂ ಪಾಂಡೆ ಅವರನ್ನು ಬಳಸಿಕೊಳ್ಳುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಮಾರಣಾಂತಿಕ ಕಾಯಿಲೆಯಾದ ಗರ್ಭಕಂಠ ಕ್ಯಾನ್ಸರ್ನಿಂದ ತಾನು ಸಾವನ್ನಪ್ಪಿದ್ದಾಗಿ ಭಾರೀ ಸುದ್ದಿಯಾಗಿದ್ದ ಪೂನಂ ಪಾಂಡೆಯನ್ನು ಸರ್ಕಾರ ಜಾಗೃತಿ ರಾಯಭಾರಿಯನ್ನಾಗಿ ಮಾಡುವ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂಬ ಸುದ್ದಿಯ ಬೆನ್ನಲ್ಲೇ ಸಚಿವಾಲಯ ಸ್ಪಷ್ಟನೆ ನೀಡಿದೆ.
ದೇಶಾದ್ಯಂತ ಸರ್ಕಾರ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಅಭಿಯಾನ ನಡೆಸುತ್ತಿದೆ. ಆದರೆ, ಪೂನಂ ಪಾಂಡೆ ಅವರನ್ನು ರಾಯಭಾರಿಯನ್ನಾಗಿ ಪರಿಗಣಿಸುವ ಯಾವುದೇ ಪ್ರಸ್ತಾವ ನಮ್ಮ ಮುಂದಿಲ್ಲ. ಕಾಯಿಲೆಯ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಉಂಟು ಮಾಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕ್ಯಾನ್ಸರ್ ಬಳಸಿ ಸುದ್ದಿಯಾಗಿದ್ದ ಪೂನಂ:ವಿವಾದಗಳಿಂದಲೇ ಹೆಚ್ಚು ಚಾಲ್ತಿಯಲ್ಲಿರುವ ಪೂನಂ ಪಾಂಡೆ, ಈಚೆಗೆ ಗರ್ಭಕಂಠ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾಗಿ ಸುದ್ದಿಯಾಗಿತ್ತು. ಅವರ ಕುಟುಂಬಸ್ಥರು, ಪೂನಂ ಪಾಂಡೆ ಸರ್ವಿಕಲ್ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಕಾಯಿಲೆ ಮತ್ತು ನಟಿಯ ಸಾವಿನ ಬಗ್ಗೆ ತೀವ್ರ ಆಘಾತ ಮೂಡಿಸಿತ್ತು. ಇದರ ಬೆನ್ನಲ್ಲೇ, ನಟಿ ತಾನೇ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ತಾನು ಸತ್ತಿಲ್ಲ, ಬದುಕಿದ್ದೇನೆ. ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ತಾವು ಈ ರೀತಿಯ ನಾಟಕವಾಡಿದ್ದಾಗಿ ಹೇಳಿದ್ದರು.
ನನಗೆ ಗರ್ಭಕಂಠದ ಕ್ಯಾನ್ಸರ್ ಇಲ್ಲ. ಆದರೆ, ಈ ರೋಗವನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಮಹಿಳೆಯರಲ್ಲಿ ಮಾಹಿತಿಯ ಕೊರತೆ ಇದೆ. ಹೀಗಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತರ ಕ್ಯಾನ್ಸರ್‌ಗಳಿಗಿಂತ ಇದು ಭಿನ್ನವಾಗಿದೆ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಹುದು. ಹೆಚ್ಪಿವಿ ಲಸಿಕೆ ಮತ್ತು ಆರಂಭದಲ್ಲೇ ಪತ್ತೆ ಮಾಡುವುದರಿಂದ ಜೀವವನ್ನು ಉಳಿಸಿಕೊಳ್ಳಬಹುದು. ಈ ಬಗ್ಗೆ ಅರಿವು ಮೂಡಿಸಲು ನಮ್ಮ ತಂಡ ನಾನು ಸಾವನ್ನಪ್ಪಿದ್ದಾಗಿ ಘೋಷಿಸಿತ್ತು ಎಂದಿದ್ದರು.
ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಮಾರಣಾಂತಿಕ ಕಾಯಿಲೆಯನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಂಡ ನಟಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9-14 ವರ್ಷ ವಯಸ್ಸಿನ ಹುಡುಗಿಯರಿಗೆ ಲಸಿಕೆ ನೀಡಲಾಗುತ್ತದೆ ಎಂದು ಘೋಷಿಸಿದೆ.
ಇದನ್ನೂ ಓದಿ:'I am alive': ನಾನು ಜೀವಂತವಾಗಿದ್ದೇನೆಂದು ಹೇಳಿಕೊಂಡ ನಟಿ ಪೂನಂ ಪಾಂಡೆ