ಕರ್ನಾಟಕ

karnataka

ETV Bharat / bharat

ಬಿಹಾರ ಶಿಕ್ಷಕರ ನೇಮಕ ಪರೀಕ್ಷೆ: ಜಾರ್ಖಂಡ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆ, 200 ಅಭ್ಯರ್ಥಿಗಳ ವಿಚಾರಣೆ - Paper Leak

ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಬಿಹಾರದ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆ ಸಂಬಂಧ ಸುಮಾರು 200ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

police-stopped-more-than-200-students-in-hotel-in-hazaribag-jharkhand
ಬಿಹಾರ ಶಿಕ್ಷಕರ ನೇಮಕಾತಿ ಪರೀಕ್ಷೆ; ಜಾರ್ಖಂಡ್‌ನ ಪ್ರಶ್ನೆಪ್ರತಿಕೆ ಸೋರಿಕೆ ಶಂಕೆ

By ETV Bharat Karnataka Team

Published : Mar 15, 2024, 8:36 PM IST

Updated : Mar 15, 2024, 10:16 PM IST

ಹಜಾರಿಬಾಗ್ (ಜಾರ್ಖಂಡ್‌):ದೇಶದ ಹಲವು ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ನೌಕರಿ ನೇಮಕಾತಿಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಸಾಕಷ್ಟು ಸದ್ದು ಮಾಡುತ್ತಿದೆ. ಪರೀಕ್ಷೆಗಳಿಗೂ ಮುನ್ನವೇ ಅಭ್ಯರ್ಥಿಗಳ ಕೈಗೆ ಪ್ರಶ್ನೆಪತ್ರಿಕೆ ಸೇರುವಂತೆ ಆಗುತ್ತಿದ್ದು, ಪರೀಕ್ಷಾ ಮಂಡಳಿಗಳು, ಪ್ರಾಧಿಕಾರಗಳ ನಿದ್ದೆಗೆಡಿಸಿದೆ. ಇದರ ನಡುವೆ ಒಟ್ಟಿಗೆ ಸೇರಿದ್ದ ಸುಮಾರು 200ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಪೊಲೀಸರು ತಡೆದು ನಿಲ್ಲಿಸಿದ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ವರದಿಯಾಗಿದೆ.

ಬಿಹಾರದಲ್ಲಿ ಶುಕ್ರವಾರದಿಂದ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಆರಂಭವಾಗಿದೆ. ಬಿಹಾರ ಲೋಕಸೇವಾ ಆಯೋಗವು ಈ ಟಿಆರ್​​ಇ - 3 ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ಜಾರ್ಖಂಡ್‌ನ ಹಜಾರಿಬಾಗ್‌ಗೆ ಕರೆತರಲಾಗಿತ್ತು. ಪರೀಕ್ಷೆ ಶುರುವಾಗುವ ಮುನ್ನವೇ ಪ್ರಶ್ನೆಪತ್ರಿಕೆಯನ್ನು ಅಭ್ಯರ್ಥಿಗಳನ್ನು ನೀಡಲಾಗಿತ್ತು. ಕಳೆದ ಎರಡು ದಿನಗಳಿಂದ ಇದರ ಬಗ್ಗೆಯೇ ಪಾಠ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

ಹಜಾರಿಬಾಗ್‌ನಲ್ಲಿ ಅಂದಾಜು 200ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಒಟ್ಟಿಗೆ ಸೇರಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಇಲ್ಲಿನ ಪೆಲಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಹಿನೂರ್ ಹೋಟೆಲ್‌ನಲ್ಲಿ ತಂಗಿದ್ದರು. ಇಂದು ಈ ಎಲ್ಲ ಅಭ್ಯರ್ಥಿಗಳು ಬಿಹಾರದಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಭಾಗವಹಿಸಲು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

ಬಸ್‌ಗಳಲ್ಲಿ ತೆರಳುತ್ತಿದ್ದ ಅಭ್ಯರ್ಥಿಗಳು:ತಮಗೆ ಲಭ್ಯವಾದ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ನಾಗವಾನ್ ಟೋಲ್ ಪ್ಲಾಜಾ ಬಳಿ ಕೆಲವು ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ, ಅಭ್ಯರ್ಥಿಗಳು ಪ್ರತ್ಯೇಕ ಬಸ್‌ಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿರುವುದು ಪತ್ತೆ ಹಚ್ಚಲಾಗಿದೆ. ಇವರೆಲ್ಲರನ್ನೂ ಪೊಲೀಸರು ತಡೆ ಹಿಡಿದು, ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ, ಕೆಲ ಪ್ರಶ್ನೆ ಪತ್ರಿಕೆಗಳನ್ನೂ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಈ ವಿಷಯವನ್ನು ಹಜಾರಿಬಾಗ್ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಸಿಂಗ್ ಖಚಿತಪಡಿಸಿದ್ದಾರೆ.

ಇಡೀ ವಿಷಯವು ಬಿಹಾರದ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸಂಬಂಧಿಸಿದೆ. ಅಲ್ಲದೇ, ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆಯೂ ಸಂಶಯ ಇದೆ. ಇದೀಗ ವಿದ್ಯಾರ್ಥಿಗಳಿಂದ ವಶಪಡಿಸಿಕೊಂಡಿರುವ ಪ್ರಶ್ನೆಪತ್ರಿಕೆಗಳನ್ನು ಪರಿಶೀಲಿಸಲಾಗುತ್ತಿದೆ. ಇದರಲ್ಲಿನ ಪ್ರಶ್ನೆಗಳು, ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳೇ ಅಥವಾ ಇಲ್ಲವೇ ಎಂಬುವುದರ ಬಗ್ಗೆ ತನಿಖೆಯ ಮಾಡಲಾಗುತ್ತಿದೆ. ಈ ಬಗ್ಗೆ ಬಿಹಾರ ಪೊಲೀಸರನ್ನೂ ಸಂಪರ್ಕ ಮಾಡಲಾಗಿದೆ ಎಂದು ಹಿರಿಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಗಾಂಜಾ ಮಾರಾಟ ದಂಧೆ: ಮಹಿಳೆ ಬಳಿ 4 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ!

Last Updated : Mar 15, 2024, 10:16 PM IST

ABOUT THE AUTHOR

...view details