ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಶುಕ್ರವಾರ ರಾತ್ರಿ ಜೆ & ಕೆ ಪೊಲೀಸ್ ಸೇವೆಗಳ (ಜೆಕೆಪಿಎಸ್) ನಾಲ್ವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ. ಶ್ರೀನಗರ, ಬಾರಾಮುಲ್ಲಾ ಮತ್ತು ಕುಪ್ವಾರ ಜಿಲ್ಲೆಗಳಿಗೆ ಹೊಸ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಾಗಿ (ಎಸ್‌ಎಸ್‌ಪಿ) ಮತ್ತು ಹಂದ್ವಾರದ ಪೊಲೀಸ್ ಅಧೀಕ್ಷಕರಾಗಿ (ಎಸ್‌ಪಿ) ನೇಮಕ ಮಾಡಿದೆ. ಕೇಂದ್ರ ಚುನಾವಣಾ ಆಯೋಗದ ಅನುಮೋದನೆಗೆ ಅನುಗುಣವಾಗಿ ಈ ಬದಲಾವಣೆ ಮಾಡಲಾಗಿದೆ.
ಗೃಹ ಪ್ರಧಾನ ಕಾರ್ಯದರ್ಶಿ ಚಂದ್ರಾಕರ್ ಭಾರ್ತಿ ಅವರು ಹೊರಡಿಸಿರುವ ಆದೇಶದ ಪ್ರಕಾರ, ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಏಳು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅವರಿಗೆ ಹೊಸ ಹುದ್ದೆಗಳನ್ನು ನೀಡಲಾಗಿದೆ.
ಶ್ರೀನಗರ, ಬಾರಾಮುಲ್ಲಾ, ಕುಪ್ವಾರ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಹಂದ್ವಾರ ಎಸ್‌ಪಿಯನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ಬುಧವಾರ ನಿರ್ದೇಶನ ನೀಡಿತ್ತು. ಅವರ ಸ್ಥಾನಕ್ಕೆ ಐಪಿಎಸ್ ಅಧಿಕಾರಿಗಳ ಸಮಿತಿಯನ್ನು ಸಲ್ಲಿಸುವಂತೆ ಆಡಳಿತಕ್ಕೆ ಸೂಚನೆ ನೀಡಿದೆ.
ಜೆಕೆಪಿಎಸ್ ಅಧಿಕಾರಿ ಇಮ್ತಿಯಾಜ್ ಹುಸೇನ್ ಮಿರ್ ಅವರನ್ನು ಎಸ್‌ಎಸ್‌ಪಿ ಶ್ರೀನಗರ, ಮೊಹಮ್ಮದ್ ಝೈದ್ ಅವರನ್ನು ಎಸ್‌ಎಸ್‌ಪಿ ಬಾರಾಮುಲ್ಲಾ, ಗುಲಾಮ್ ಜೀಲಾನಿ ವಾನಿ ಅವರನ್ನು ಎಸ್‌ಎಸ್‌ಪಿ ಕುಪ್ವಾರಾ ಮತ್ತು ಇಫ್ರೋಜ್ ಅಹ್ಮದ್ ಅವರನ್ನು ಎಸ್‌ಪಿ ಹಂದ್ವಾರಾ ಆಗಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.