ಚೆನ್ನೈ, ತಮಿಳುನಾಡು:ತಮಿಳುನಾಡು ಸರ್ಕಾರದ ಸಚಿವ ಹಾಗೂ ಡಿಎಂಕೆ ನಾಯಕ ಅನಿತಾ ರಾಧಾಕೃಷ್ಣನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವೇದಿಕೆಯಲ್ಲಿ ಭಾಷಣ ಮಾಡುವಾಗ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದೂರಿನ ಆಧಾರದ ಮೇಲೆ ಮೇಘನಪುರಂ ಪೊಲೀಸರು ಸಚಿವ ಅನಿತಾ ರಾಧಾಕೃಷ್ಣನ್ ವಿರುದ್ಧ ಸೆಕ್ಷನ್ 294 (ಬಿ) ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಡಿಎಂಕೆ ನಾಯಕ ನಮ್ಮ ಗೌರವಾನ್ವಿತ ಪ್ರಧಾನಿ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಶನಿವಾರ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಟೀಕಿಸಲು ಏನೂ ಇಲ್ಲದಿರುವಾಗ, ಡಿಎಂಕೆ ನಾಯಕರು ಈ ಮಟ್ಟಕ್ಕೆ ಇಳಿದಿದ್ದಾರೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಎಂಕೆ ಸಂಸದೆ ಕನಿಮೊಳಿ ವೇದಿಕೆಯಲ್ಲಿದ್ದು, ಸಹೋದ್ಯೋಗಿಯನ್ನು ಮನವೊಲಿಸಲು ಮುಂದಾಗಲಿಲ್ಲ.
ಮಾರ್ಚ್ 22ರಂದು ತೂತುಕುಡಿಯ ತಿರುಚೆಂದೂರು ಸಮೀಪದ ತಾಂಡುಪತ್ತು ಗ್ರಾಮದಲ್ಲಿ ನಡೆದ ಐಎನ್‌ಡಿಐಎ ಮೈತ್ರಿಕೂಟದ ಸಭೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ತೂತುಕುಡಿ ಸಂಸದೆ ಕನಿಮೊಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೀನುಗಾರಿಕಾ ಸಚಿವ ಅನಿತಾ ರಾಧಾಕೃಷ್ಣನ್ ಅವರು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.
ತಮ್ಮ ಭಾಷಣದ ವೇಳೆ ಸಚಿವ ರಾಧಾಕೃಷ್ಣನ್ ಅವರು ಬಿಜೆಪಿಯನ್ನು ಟೀಕಿಸಿದರು. ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಿದ ಅವರು, ಕಾಮರಾಜರ ಬಗ್ಗೆ ಮಾತನಾಡುವ ಅರ್ಹತೆ ಅವರಿಗೆ ಇಲ್ಲ ಎಂದು ಕಿಡಿಕಾರಿದರು. ವಿಡಿಯೋದಲ್ಲಿ ಸೆರೆಯಾಗಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಬಹುಬೇಗ ಹರಡಿ ವಿವಾದಕ್ಕೆ ಕಾರಣವಾಗಿತ್ತು.