ವಿಜಯವಾಡ, ಆಂಧ್ರಪ್ರದೇಶ:ಪೊಲೀಸರ ಸೋಗಿನಲ್ಲಿ ಗಾಂಜಾ ಸಾಗಾಟಕ್ಕೆ ಮುಂದಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ರಾಮಭದ್ರಪುರಂ ಮಂಡಲದ ಕೊಟ್ಟಕ್ಕಿಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಹಕ್ಕುಂ ಸೋಲಂಕಿ, ಅವರ ಪುತ್ರ ಅನಿಲ್ ಸೋಲಂಕಿ ಮತ್ತು ಒಡಿಶಾದ ಜ್ಯೋತಿ ಭೂಷಣ್ ಬೆಹೆರಾ ಬಂಧಿತ ಆರೋಪಿಗಳು. ಬಂಧಿತರು ವಾಹನಗಳ (ವ್ಯಾನ್) ಮೇಲೆ ಪೊಲೀಸ್ ಎಂದು ಬರೆದಿರುವ ಬೋರ್ಡ್ ಇಟ್ಟುಕೊಂಡು ಸಿನಿಮಿಯ ರೀತಿಯಲ್ಲಿ ಗಾಂಜಾ ಸಾಗಾಟಕ್ಕೆ ಮುಂದಾಗಿದ್ದರು. ಕೊಟ್ಟಕ್ಕಿ ಎಂಬ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಕಲ್ಲಿದ್ದಲು ಲಾರಿ ಮತ್ತು ಎರಡು ವ್ಯಾನ್‌ಗಳ ಸಹಿತ ಒಡಿಶಾದಿಂದ ಗಾಂಜಾ ಸಾಗಾಟಕ್ಕೆ ಮುಂದಾಗಿದ್ದ ಆರೋಪಿಗಳು, ನಕಲಿ ಪೊಲೀಸ್ ಅಧಿಕಾರಿಗಳಂತೆ ಬಂದಿದ್ದರು. ಒಡಿಶಾ ಮತ್ತು ಆಂಧ್ರಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶವಾದ ಕೊಟ್ಟಕ್ಕಿ ಚೆಕ್‌ಪೋಸ್ಟ್‌ನಲ್ಲಿ ಅಸಲಿ ಪೊಲೀಸರು ವಾಹನವನ್ನು ಪರಿಶೀಲಿಸಲು ಪ್ರಯತ್ನಿಸಿದಾಗ ಆರೋಪಿಗಳು ತಾವು ಒಡಿಶಾ ಪೊಲೀಸರು ಎಂದು ಹೇಳಿಕೊಂಡಿದ್ದರು.
ಒಡಿಶಾ ಸರ್ಕಾರಕ್ಕೆ ಸೇರಿದ ಯಂತ್ರೋಪಕರಣಗಳನ್ನು ರಿಪೇರಿ ಮಾಡಲು ವಿಶಾಖಪಟ್ಟಣಕ್ಕೆ ಲಾರಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಹೇಳುವ ಮೂಲಕ ಪೊಲೀಸರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಅನುಮಾನ ಬಂದು ಪೊಲೀಸರು ತಪಾಸಣೆ ನಡೆಸಿದಾಗ ಲಾರಿಯಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ತಪಾಸಣೆ ವೇಳೆ ಲಾರಿಯಲ್ಲಿ 810 ಕೆ.ಜಿ.ಯಷ್ಟು ಗಾಂಜಾ ಸಿಕ್ಕಿದ್ದು, ಕೂಡಲೇ ವಾಹನಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಡಿಎಸ್ಪಿ ಶ್ರೀನಿವಾಸ ರಾವ್ ಸುದ್ದಿಗೋಷ್ಠಿ (ETV Bharat) ''ಕೊಟ್ಟಕ್ಕಿ ಚೆಕ್ ಪೋಸ್ಟ್ನಲ್ಲಿ ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾಗ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಸಿನಿಮಿಯ ರೀತಿಯಲ್ಲಿ ಲಾರಿಗೆ ಬೆಂಗಾವಲಾಗಿ ಒಡಿಶಾ ಪೊಲೀಸ್ ಇಲಾಖೆಯ ನಂಬರ್ ಪ್ಲೇಟ್, ಬೋರ್ಡ್ ಹಾಕಿದ್ದ ಎರಡು ವ್ಯಾನ್ಗಳು ಬಂದಿದ್ದು, ನಮ್ಮ ಸಿಬ್ಬಂದಿ ಅನುಮಾನಗೊಂಡು ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ತನಿಖೆ ನಡೆಸಿದಾಗ ಬಂಧಿತರೆಲ್ಲ ನಕಲಿ ಪೊಲೀಸ್ ಅಧಿಕಾರಿಗಳು ಎಂಬುದನ್ನು ಗೊತ್ತಾಗಿದೆ'' ಎಂದು ಡಿಎಸ್ಪಿ ಶ್ರೀನಿವಾಸ್ ರಾವ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹೊಸ ವರ್ಷಾಚರಣೆ ಟಾರ್ಗೆಟ್: ಬೆಂಗಳೂರಿಗೆ ಆಮದಾಗುತ್ತಿದ್ದ 3.25 ಕೋಟಿ ಮೌಲ್ಯದ ಗಾಂಜಾ ಜಪ್ತಿ - BENGALURU POLICE SEIZED GANJA