ಹೈದರಾಬಾದ್:ಉಚಿತ ಹಲೀಮ್ನಿಂದ ಇಲ್ಲಿನ ನಗರವೊಂದರಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ನಡೆದಿದೆ. ಹಲೀಮ್ ಪದಾರ್ಥದ ಹೆಸರು ಕೇಳಿದರೆ ಎಂಥವರ ಬಾಯಲ್ಲೂ ನೀರೂರುತ್ತದೆ. ಒಂದು ಕಾಲದಲ್ಲಿ ನವಾಬರ ಡೈನಿಂಗ್ ಟೇಬಲ್ ಮೇಲೆ ರಾಜಮರ್ಯಾದೆಯಿಂದ ಇರುತ್ತಿದ್ದ ಹಲೀಮ್ ಇಂದು ಬಡವರ ಅಚ್ಚುಮೆಚ್ಚಿನ ಖಾದ್ಯವಾಗಿ ಮಾರ್ಪಟ್ಟಿದೆ. ಈಗ ಇದೇ ಹಲೀಮ್ನ ರುಚಿ ಸವಿಯಲು ಹೋದ ಹೈದರಾಬಾದ್ ಮಂದಿ ಪೊಲೀಸರಿಂದ ಲಾಠಿ ಏಟು ತಿಂದಿದ್ದಾರೆ.
ಹೈದರಾಬಾದ್ನ ಮಲಕ್ಪೇಟೆಯ ಹಾಜಿಬೋ ಹೋಟೆಲ್ ರಂಜಾನ್ ಹಿನ್ನೆಲೆ ಮಂಗಳವಾರ ಒಂದು ದಿನ ಉಚಿತ ಹಲೀಮ್ ನೀಡುವುದಾಗಿ ಘೋಷಿಸಿತ್ತು. ಉಚಿತ ಅಂದರೆ ಜನರು ಬಿಟ್ಟಾರೆಯೇ ಜಾತ್ರೆಗೆ ಸೇರುವಷ್ಟು ಮಂದಿ ಉಚಿತ ಹಲೀಮ್ ಸವಿಯಲು ಪೇಟೆಯಲ್ಲೇ ಸಾಲುಗಟ್ಟಿ ನಿಂತಿದ್ದರು. ಮಂಗಳವಾರ ಸಂಜೆ 7ರಿಂದ 8ರ ವರೆಗೆ ನೀಡುವುದಾಗಿ ಹೋಟೆಲ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿತ್ತು. ಇದರಿಂದ ಹೋಟೆಲ್ ಮುಂದೆ ಜನಸಾಗರವೇ ಹರಿದು ಬಂದು ಟ್ರಾಫಿಕ್ ಜಾಮ್ ಉಂಟಾಗಿತ್ತು.