ನವದೆಹಲಿ:ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ನೋಂದಣಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹರ್ಷ ವ್ಯಕ್ತಪಡಿಸಿದ್ದಾರೆ. ರೂಫ್‌ಟಾಪ್ ಸೌರ ಯೋಜನೆಯಡಿಯಲ್ಲಿ 1 ಕೋಟಿಗೂ ಹೆಚ್ಚು ಕುಟುಂಬಗಳು ಉಚಿತ ವಿದ್ಯುತ್‌ಗಾಗಿ ನೋಂದಾಯಿಸಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆದಷ್ಟು ಬೇಗನೇ ನೋಂದಣಿ ಮಾಡಿಸಿ- ಪ್ರಧಾನಿ ಮೋದಿ:"ಅತ್ಯುತ್ತಮ ಸುದ್ದಿ! ಇದು ಪ್ರಾರಂಭವಾದ ಸುಮಾರು ಒಂದು ತಿಂಗಳಲ್ಲಿ, 1 ಕೋಟಿ ಕುಟುಂಬಗಳು ಈಗಾಗಲೇ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ನೋಂದಾಯಿಸಿಕೊಂಡಿವೆ. ರಾಷ್ಟ್ರದ ಎಲ್ಲಾ ಭಾಗಗಳಲ್ಲಿರುವ ಕುಟುಂಬಗಳು ನೋಂದಣಿ ಮಾಡಿಸಲು ಮುಂದಾಗಿವೆ. ಅಸ್ಸೋಂ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯದ ತಲಾ 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ನೋಂದಣಿಗಳನ್ನು ಮಾಡಿಸಿವೆ. ಇನ್ನು ವೆಬ್ಸೈಟ್- pmsuryaghar.gov.in ನಲ್ಲಿ ಯೋಜನೆಯಡಿ ಲಾಭ ಪಡೆಯಲು ಆದಷ್ಟು ಬೇಗನೇ ನೋಂದಣಿ ಮಾಡಿಸಬೇಕು'' ಎಂದು ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
''ಈ ಯೋಜನೆಯು ಶಕ್ತಿ ಉತ್ಪಾದನೆಯನ್ನು ಖಾತ್ರಿಪಡಿಸುವುದರ ಜೊತೆಗೆ ಮನೆಗಳಿಗೆ ವಿದ್ಯುತ್ ವೆಚ್ಚದಲ್ಲಿ ಗಣನೀಯ ಕಡಿತವನ್ನು ಭರವಸೆ ನೀಡುತ್ತದೆ. ಇದು ಉತ್ತಮ ಗ್ರಹಕ್ಕೆ ಕೊಡುಗೆ ನೀಡುವ ಮೂಲಕ ಪರಿಸರಕ್ಕಾಗಿ ಜೀವನಶೈಲಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು ಸಜ್ಜಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.