ನವದೆಹಲಿ: ದೇಶ ಮತ್ತು ಸಮಾಜವನ್ನು ಉತ್ತಮಗೊಳಿಸುವ ಪರಿವರ್ತಕರು ಹೆಣ್ಣು ಮಕ್ಕಳು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. 'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ'ಯ ಅಂಗವಾಗಿ ಇಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ದೇಶದಲ್ಲಿ ಹೆಣ್ಣು ಮಕ್ಕಳು ಅಭಿವೃದ್ಧಿ ಹೊಂದಲು ಬೇಕಾಗಿರುವ ಎಲ್ಲ ಅವಕಾಶಗಳನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ಜನವರಿ 24ರಂದು 'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ'ವಾಗಿ ಆಚರಿಸಲಾಗುತ್ತಿದೆ. ಈ ಮೂಲಕ ಮಹಿಳೆಯರ ಶಿಕ್ಷಣ, ಆರೋಗ್ಯದ ಪ್ರಾಮುಖ್ಯತೆ, ಲಿಂಗ ತಾರತಮ್ಯ ನಿವಾರಣೆ ಮತ್ತು ಅವರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
'ಹೆಣ್ಣು ಮಕ್ಕಳ ದಿನದಂದು ಹೆಣ್ಣು ಮಗುವಿನ ಸಾಧನೆಗಳಿಗೆ ನಾವು ನಮನ ಸಲ್ಲಿಸುತ್ತೇವೆ. ಎಲ್ಲ ವಲಯದಲ್ಲೂ ಪ್ರತಿ ಹೆಣ್ಣು ಮಗುವಿನ ಸಾಮರ್ಥ್ಯವನ್ನು ನಾವು ಗುರುತಿಸುತ್ತೇವೆ. ಹೆಣ್ಣು ಮಕ್ಕಳು ನಮ್ಮ ಸಮಾಜ ಮತ್ತು ದೇಶವನ್ನು ಉತ್ತಮವಾಗಿ ಪರಿವರ್ತಿಸುವಲ್ಲಿ ಪ್ರಮುಖರು. ಕಳೆದ ದಶಕದಿಂದ ನಮ್ಮ ಸರ್ಕಾರ ಪ್ರತಿ ಹೆಣ್ಣು ಮಗುವಿನ ಕಲಿಕೆ, ಬೆಳವಣಿಗೆಗೆ ಅವಕಾಶವನ್ನು ನೀಡುವ ಮೂಲಕ ದೇಶ ಕಟ್ಟುವ ಪ್ರಯತ್ನ ನಡೆಸುತ್ತಿದೆ' ಎಂದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2015ರಲ್ಲಿ ಹೆಣ್ಣು ಮಕ್ಕಳ ಜನನ ದರ ಹೆಚ್ಚಿಸಲು, ಸಬಲರನ್ನಾಗಿ ಮಾಡಲು ಭೇಟಿ ಬಚಾವೋ, ಭೇಟಿ ಪಡಾವೋ (ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ) ಎಂಬ ಘೋಷವಾಕ್ಯದ ಮೂಲಕ ಅವರ ಅಭಿವೃದ್ಧಿಗೆ ಯೋಜನೆ ಪ್ರಾರಂಭಿಸಿತ್ತು.
ಹೆಣ್ಣು ಮಕ್ಕಳ ದಿನಾಚರಣೆಯ ಇತಿಹಾಸ, ಮಹತ್ವ:2008ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಸ್ಥಾಪಿಸಿತು. ಈ ದಿನದ ಪ್ರಮುಖ ಉದ್ದೇಶ, ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಯನ್ನು ಹೋಗಲಾಡಿಸಿ, ಜಾಗೃತಿ ಮೂಡಿಸುವುದು. ಹೆಣ್ಣು ಮಗಳು ಸಣ್ಣ ವಯಸ್ಸಿನಿಂದಲೇ ಶಿಕ್ಷಣ ಸೇರಿದಂತೆ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಆಕೆಯ ಸಾಮರ್ಥ್ಯ ಕೇವಲ ಮನೆಗೆಲಸಕ್ಕೆ ಸೀಮಿತವಾಗುತ್ತಿದೆ. ಈ ನಿಟ್ಟಿನಲ್ಲಿ ಆಕೆಯ ಶಿಕ್ಷಣದ ಹಕ್ಕು, ಸಮಾನತೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ.
ಈ ದಿನದ ಪ್ರಾಥಮಿಕ ಗುರಿ ಲಿಂಗ ತಾರತಮ್ಯ, ಹೆಣ್ಣು ಭ್ರೂಣ ಹತ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು. ಹೆಣ್ಣು ಮಗುವಿನ ಕುರಿತು ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವುದಾಗಿದೆ. ಈ ನಿಟ್ಟಿನಲ್ಲಿ ಹೆಣ್ಣು ಮಗುವಿಗೆ ಮಾಹಿತಿ, ಸಂಪನ್ಮೂಲ ಮತ್ತು ಅವಕಾಶಗಳನ್ನು ನೀಡಿ ಆಕೆಯನ್ನು ಸಬಲೀಕರಣಗೊಳಿಸುವುದಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣು ಮಗುವನ್ನು ಪ್ರೋತ್ಸಾಹಿಸಿ, ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಈ ಮುಖೇನ ಸಮಾನ ಅವಕಾಶ ನೀಡುವ ಕೆಲಸ ನಡೆಯುತ್ತಿದೆ. ಇಂಥ ಯೋಜನೆಗಳ ಪೈಕಿ ಭೇಟಿ ಬಚಾವೋ, ಭೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಯೋಜನೆ, ಬಾಲಿಕಾ ಸಮೃದ್ಧಿ ಯೋಜನೆ, ಕರ್ನಾಟಕ ಭಾಗ್ಯಲಕ್ಷ್ಮಿ ಯೋಜನೆ, ಸಿಬಿಎಸ್ಇ ಉಡಾನ್ ಯೋಜನೆ, ಧನಲಕ್ಷ್ಮೀ ಯೋಜನೆಗಳು ಪ್ರಮುಖವು.
ಇದನ್ನೂ ಓದಿ: ಅಯೋಧ್ಯೆಯ ಹೊಸ ರಾಮ ಲಲ್ಲಾ ವಿಗ್ರಹಕ್ಕೆ ನೂತನ ಹೆಸರು ನಾಮಕರಣ