ನವದೆಹಲಿ: 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 22 ಮತ್ತು 23ರಂದು ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಗುಂಪಿನ ಸದಸ್ಯ ರಾಷ್ಟ್ರಗಳು ಹಾಗೂ ಇತರ ಆಹ್ವಾನಿತರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಈ ವರ್ಷ ಪ್ರಧಾನಿ ಮೋದಿ ಅವರ ಎರಡನೇ ರಷ್ಯಾ ಭೇಟಿ ಇದಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ 2023ರ ಶೃಂಗಸಭೆಯಲ್ಲಿ ಈಜಿಪ್ಟ್, ಇರಾನ್, ಇಥಿಯೋಪಿಯಾ ಮತ್ತು ಯುಎಇಗಳಿಗೆ ಸದಸ್ಯತ್ವವನ್ನು ನೀಡುವ ಮೂಲಕ ಗುಂಪಿನ ಸದಸ್ಯ ರಾಷ್ಟ್ರಗಳ ಬಲವನ್ನು 9ಕ್ಕೆ ಹೆಚ್ಚಿಸಿದ ನಂತರ ನಡೆಯುತ್ತಿರುವ ಮೊದಲ ಶೃಂಗಸಭೆ ಇದಾಗಿದೆ. ಗುಂಪಿಗೆ ಸೇರುವಂತೆ ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾಗಳನ್ನು ಕೂಡ ಆಹ್ವಾನಿಸಲಾಗಿತ್ತು. ಆದರೆ ಸರ್ಕಾರ ಬದಲಾದ ನಂತರ ಅರ್ಜೆಂಟಿನಾ ಗುಂಪಿಗೆ ಸೇರಲು ನಿರಾಕರಿಸಿದೆ. ಇನ್ನು ಸೌದಿ ಅರೇಬಿಯಾ ಈ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಷ್ಯಾದ ಅಧ್ಯಕ್ಷತೆಯಲ್ಲಿ ಕಜಾನ್ನಲ್ಲಿ ನಡೆಯಲಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಕ್ಟೋಬರ್ 22-23 ರಂದು ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಎಂಇಎ ತಿಳಿಸಿದೆ.
"ನ್ಯಾಯಯುತ ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಹುಪಕ್ಷೀಯತೆಯನ್ನು ಬಲಪಡಿಸುವುದು" ಎಂಬ ಥೀಮ್ ಆಧರಿತ ಈ ಶೃಂಗಸಭೆಯು ಪ್ರಮುಖ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಲು ನಾಯಕರಿಗೆ ವೇದಿಕೆಯಾಗಲಿದೆ. ಬ್ರಿಕ್ಸ್ ಪ್ರಾರಂಭಿಸಿದ ಉಪಕ್ರಮಗಳ ಪ್ರಗತಿಯನ್ನು ನಿರ್ಣಯಿಸಲು ಮತ್ತು ಭವಿಷ್ಯದ ಸಹಯೋಗಕ್ಕಾಗಿ ಸಂಭಾವ್ಯ ಕ್ಷೇತ್ರಗಳನ್ನು ಗುರುತಿಸಲು ಶೃಂಗಸಭೆ ಅಮೂಲ್ಯ ಅವಕಾಶವನ್ನು ನೀಡುತ್ತದೆ" ಎಂದು ಎಂಇಎ ಹೇಳಿದೆ.