ನವದೆಹಲಿ:ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡಿರುವ 71 ಸಾವಿರ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ನಾಳೆ (ಸೋಮವಾರ) ಪ್ರಮಾಣಪತ್ರಗಳನ್ನು ವಿತರಣೆ ಮಾಡಲಿದ್ದಾರೆ. ಪ್ರಧಾನಿ ಕಚೇರಿಯಿಂದ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸರ್ಕಾರಿ ಉದ್ಯೋಗಗಳ ಸೃಷ್ಟಿ ಮತ್ತು ಯುವಕರಿಗೆ ಹುದ್ದೆಗಳನ್ನು ನೀಡಲು ಕೇಂದ್ರ ಸರ್ಕಾರ 'ರೋಜ್‌ಗಾರ್ ಮೇಳ'ವನ್ನು ನಡೆಸುತ್ತಿದೆ. ಇದರಡಿ, ಅರ್ಹರಿಗೆ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಹುದ್ದೆ ನೀಡಲಾಗುತ್ತಿದೆ.
ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮ ನಡೆಯಲಿದ್ದು, ನೇಮಕಾತಿಗೆ ಆಯ್ಕೆಯಾದವರ ಕುರಿತು ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಉದ್ಯೋಗ ಮೇಳವು ದೇಶ ಕಟ್ಟುವ ಮತ್ತು ಸ್ವಯಂ ಸಬಲೀಕರಣಕ್ಕಾಗಿ ಯುವಜನತೆಗೆ ಅರ್ಥಪೂರ್ಣ ಅವಕಾಶ ಕಲ್ಪಿಸುತ್ತದೆ. ಇದರ ಜೊತೆಗೆ, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನ ಮಂತ್ರಿಯವರ ಬದ್ಧತೆ ಈಡೇರಿಸುವ ನಿಟ್ಟಿನಲ್ಲಿ ಈ ಮೇಳವು ಮಹತ್ವದ್ದಾಗಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.