ನವದೆಹಲಿ: ರಾಷ್ಟ್ರ ರಾಜಧಾನಿ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಬೂತ್ಮಟ್ಟದ ಕಾರ್ಯಕರ್ತರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮೇರಾ ಬೂತ್ ಸಬ್ಸೆ ಮಜ್ಬೂತ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
ಇಂದು ಮಧ್ಯಾಹ್ನ 1ಗಂಟೆಗೆ ಅವರು ಈ ಸಂವಾದ ನಡೆಸಲಿದ್ದಾರೆ ಎಂದು ನಮೋ ಆಪ್‌ನ ರಾಷ್ಟ್ರೀಯ ಸಂಯೋಜಕ ಮತ್ತು ಬಿಜೆಪಿ ನಾಯಕ ಕುಲ್ಜೀತ್ ಸಿಂಗ್ ಚಾಹಲ್ ತಿಳಿಸಿದರು.
ಮೇರಾ ಬೂತ್ ಸಬ್ಸೆ ಮಜ್ಬೂತ್ ಕಾರ್ಯಕ್ರಮದಲ್ಲಿ ದೆಹಲಿಯ ಎಲ್ಲಾ 256 ವಾರ್ಡ್‌ಗಳ 13,033 ಬೂತ್‌ಗಳ ಪಕ್ಷದ ಕಾರ್ಯಕರ್ತರು ಭಾಗಿಯಾಗಲಿದ್ದು, ಪ್ರಧಾನಿ ಅವರ ವಿಡಿಯೋ ಸಂವಾದ ಆಲಿಸಲಿದ್ದಾರೆ. ಈ ವೇಳೆ ನಡೆಯುವ ಚರ್ಚೆಯಲ್ಲಿ ಕೆಲವು ಕಾರ್ಯಕರ್ತರಿಗೂ ತೊಡಗಿಸಿಕೊಳ್ಳುವ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ದೆಹಲಿಯ ಬಿಜೆಪಿಯ ಚುನಾವಣಾ ಉಸ್ತುವಾರಿ ಬೈಜಯಂತ್ ಪಾಂಡಾ, ಸಹ-ಪ್ರಭಾರಿ ಅಲ್ಕಾ ಗುರ್ಜರ್ ಮತ್ತು ಅತುಲ್ ಗರ್ಗ್, ಪಕ್ಷದ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹಾಗೂ ದೆಹಲಿಯ ಎಲ್ಲಾ ಸಂಸದರು, ಶಾಸಕರು ಮತ್ತು ಕೌನ್ಸಿಲರ್‌ಗಳು ಹಾಗೂ ಮನ್ ಕಿ ಬಾತ್ ಪ್ರಸಾರ ತಂಡದ ಸದಸ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಫೆ. 5ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳಾದ ಜೆಡಿಯು ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ದೆಹಲಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.