ದ್ವಾರಕಾ (ಗುಜರಾತ್):ಒಂದು ಕುಟುಂಬದ ಉದ್ಧಾರಕ್ಕಾಗಿ ಕಾಂಗ್ರೆಸ್ ತನ್ನ ಇಡೀ ಶಕ್ತಿಯನ್ನು ವ್ಯಯ ಮಾಡಿತು. ಐದು ವರ್ಷಗಳ ಕಾಲಾವಧಿಯ ಸರ್ಕಾರವನ್ನು ಹೇಗೆ ನಡೆಸಬೇಕು ಎಂಬ ದೂರದೃಷ್ಟಿ ಇಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಕುಟುಂಬವನ್ನು ಟೀಕಿಸಿದರು.
ದ್ವಾರಕಾದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಆಡಳಿತದ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರವನ್ನು ಮರೆಮಾಚಲು, ಕಾಂಗ್ರೆಸ್ ಸಂಪೂರ್ಣ ಶಕ್ತಿಯನ್ನು ಬಳಸಿತು. 10 ವರ್ಷದಲ್ಲಿ 11ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವ ಶಕ್ತಿ ಕೈ ಪಕ್ಷಕ್ಕಿದೆ ಎಂದು ಕಾಂಗ್ರೆಸ್ ಆರ್ಥಿಕ ನೀತಿ ಬಗ್ಗೆ ವ್ಯಂಗ್ಯವಾಡಿದರು.
ಜನರ ಮೂಲಸೌಕರ್ಯಕ್ಕಾಗಿ ಬಳಸಬೇಕಾದ ಬಜೆಟ್ ಅನ್ನು ಹಗರಣಗಳನ್ನು ನಡೆಸಿ ಲೂಟಿ ಮಾಡಲಾಯಿತು. 2ಜಿ, ಕಾಮನ್ವೆಲ್ತ್, ಹೆಲಿಕಾಪ್ಟರ್ ಹಗರಣ, ಮತ್ತು ಜಲಾಂತರ್ಗಾಮಿ ಹಗರಣ ಸೇರಿದಂತೆ ದೇಶದ ಪ್ರತಿಯೊಂದು ಅತ್ಯಮೂಲ್ಯ ಯೋಜನೆಗಳಲ್ಲಿ ಕಾಂಗ್ರೆಸ್ ದ್ರೋಹ ಮಾಡಿದೆ. ಹಿಂದಿನ ಸರಕಾರಗಳ ಅವಧಿಯಲ್ಲಿ ನಡೆಯುತ್ತಿದ್ದ ಸಾವಿರಾರು ಕೋಟಿ ಮೌಲ್ಯದ ಹಗರಣಗಳನ್ನು ಈಗ ನಿಲ್ಲಿಸಲಾಗಿದೆ. 10 ವರ್ಷಗಳಲ್ಲಿ ರಾಷ್ಟ್ರವು 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಪಕ್ಷದ ಕೆಲಸ ಕುಟುಂಬ ರಕ್ಷಣೆಯಲ್ಲ:ಒಂದು ರಾಷ್ಟ್ರೀಯ ಪಕ್ಷದ ಕೆಲಸ ಕುಟುಂಬವನ್ನು ರಕ್ಷಣೆ ಮಾಡುವುದಲ್ಲ. ಆದ್ರೆ ತನ್ನೆಲ್ಲಾ ಶಕ್ತಿಯನ್ನು ಕಾಂಗ್ರೆಸ್ ಇದಕ್ಕೇ ಬಳಸಿದೆ. ಒಂದೇ ಕುಟುಂಬಕ್ಕಾಗಿ ಎಲ್ಲವನ್ನೂ ಮಾಡಿದಲ್ಲಿ, ದೇಶವನ್ನು ಕಟ್ಟುವ ಬಗ್ಗೆ ಯಾರು ಚಿಂತಿಸುತ್ತಾರೆ. ಕೈ ಪಕ್ಷದ ಶಕ್ತಿಯು ಐದು ವರ್ಷಗಳ ಕಾಲ ಸರ್ಕಾರವನ್ನು ಹೇಗೆ ನಡೆಸುವುದು ಎಂಬುದರ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಪ್ರಧಾನಿ ಮೋದಿ ಹರಿಹಾಯ್ದರು.