ನವದೆಹಲಿ:10 ಲಕ್ಷ ಉದ್ಯೋಗ ನೀಡುವ ಗುರಿ ಹೊಂದಿರುವ ರೋಜ್‌ಗಾರ್ ಮೇಳ ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿ ಅವರು 1 ಲಕ್ಷಕ್ಕೂ ಅಧಿಕ ಯುವಕರಿಗೆ ನೇಮಕಾತಿ ಪತ್ರವನ್ನು ಸೋಮವಾರ ವಿತರಿಸಿದರು. ಈ ಮೂಲಕ ಸರ್ಕಾರ ಈವರೆಗೆ 8 ಲಕ್ಷಕ್ಕೂ ಅಧಿಕ ಯುವಜನತೆಗೆ ಉದ್ಯೋಗ ನೀಡಿದಂತಾಗಿದೆ.
ನೇಮಕಾತಿ ಪತ್ರ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ 10 ವರ್ಷಗಳ ಅವಧಿಯಲ್ಲಿ 8 ಲಕ್ಷಕ್ಕೂ ಅಧಿಕ ಯುವಕರಿಗೆ ಉದ್ಯೋಗ ನೀಡಿದೆ. ಈ ಹಿಂದಿನ ಸರ್ಕಾರಕ್ಕಿಂತಲೂ 1.5 ಪಟ್ಟು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.
ಈ ಹಿಂದೆ ಉದ್ಯೋಗ ನೀಡುವ ನೀಡುವ ನೆಪದಲ್ಲಿ ಸರ್ಕಾರಗಳೇ ಭ್ರಷ್ಟಾಚಾರ ಮಾಡುತ್ತಿದ್ದವು. ನೇಮಕಾತಿ ಪತ್ರ ನೀಡುವುದನ್ನು ವಿಳಂಬ ಮಾಡಿ ಹಣ ಮಾಡಿಕೊಳ್ಳುತ್ತಿದ್ದವು. ಆದರೆ, ನಮ್ಮ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.
ನಿಗದಿತ ಅವಧಿಯಲ್ಲಿ ನೇಮಕ:ಎಲ್ಲ ಯುವಕರಿಗೆ ಈಗ ಸಮಾನ ಅವಕಾಶ ನೀಡಲಾಗುತ್ತಿದೆ. ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ ಸರ್ಕಾರಿ ಇಲಾಖೆಗಳಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ನಮ್ಮ ಸರ್ಕಾರ ನಿಗದಿತ ಚೌಕಟ್ಟಿನ ಸಮಯದೊಳಗೆ ನೇಮಕಾತಿಯನ್ನು ಮುಗಿಸಿ, ಯುವಕರ ಕೌಶಲ್ಯವನ್ನು ಒರೆಗೆ ಹಚ್ಚುತ್ತಿದೆ ಎಂದು ಸರ್ಕಾರದ ಕಾರ್ಯತಂತ್ರವನ್ನು ಸಮರ್ಥಿಸಿಕೊಂಡರು.