ನವದೆಹಲಿ: ರಷ್ಯಾದ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ (ಮಾರ್ಚ್ 22) ರಾತ್ರಿ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 60 ಜನರು ಸಾವನ್ನಪ್ಪಿದ್ದಾರೆ. 145ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಕೃತ್ಯದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು (ISIS) ಹೊತ್ತುಕೊಂಡಿದೆ.
ಮಾಸ್ಕೋದ ಮ್ಯೂಸಿಕ್ ಕನ್ಸರ್ಟ್ ಹಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ''ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ಈ ದುಃಖದ ಸಮಯದಲ್ಲಿ ಭಾರತವು ರಷ್ಯಾ ಸರ್ಕಾರ ಮತ್ತು ಜನರೊಂದಿಗೆ ಬೆಂಬಲವಾಗಿ ನಿಂತಿದೆ" ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಶಸ್ತ್ರಸಜ್ಜಿತ ಉ್ರಗರಿಂದ ಗುಂಡಿ ದಾಳಿ: ಅಪರಿಚಿತ ಬಂದೂಕುಧಾರಿಗಳು ದೇಹದ ರಕ್ಷಾಕವಚವನ್ನು ಧರಿಸಿ ಮತ್ತು ಆಕ್ರಮಣಕಾರಿ ರೈಫಲ್‌ಗಳೊಂದಿಗೆ ಶಸ್ತ್ರಸಜ್ಜಿತರಾಗಿ ಮಾಸ್ಕೋ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ ಮನಬಂದಂತೆ ಗುಂಡು ಹಾರಿಸಿದ್ದಾರೆ. ಜೊತೆಗೆ ಗ್ರೆನೇಡ್ ಎಸೆದಿದ್ದರಿಂದ ಮಾಸ್ಕೋ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕ್ರೋಕಸ್ ಸಿಟಿ ಹಾಲ್ ಹತ್ಯಾಕಾಂಡದ ದಾಳಿಯನ್ನು ಭದ್ರತಾ ಸಂಸ್ಥೆ ಎಫ್‌ಎಸ್‌ಬಿ ತನಿಖೆ ನಡೆಸುತ್ತಿದೆ. ರಷ್ಯಾದ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆ ಸುಮಾರಿಗೆ ಮಾಸ್ಕೋ ಕ್ರೋಕಸ್ ಸಿಟಿ ಹಾಲ್‌ನಲ್ಲಿ ದಾಳಿ ನಡೆದಿದೆ.