ಕರ್ನಾಟಕ

karnataka

By ETV Bharat Karnataka Team

Published : May 28, 2024, 4:51 PM IST

ETV Bharat / bharat

ಸುಪ್ರೀಂ ಕೋರ್ಟ್​ ಕಟ್ಟಡ ಕೆಡವದಂತೆ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್​ - SC building demolition

ಈಗಿರುವ ಸುಪ್ರೀಂ ಕೋರ್ಟ್​ ಕಟ್ಟಡವನ್ನು ಕೆಡವದಂತೆ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್​ ರಿಜಿಸ್ಟ್ರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.

ಸುಪ್ರೀಂ ಕೋರ್ಟ್​
ಸುಪ್ರೀಂ ಕೋರ್ಟ್​ (IANS image)

ನವದೆಹಲಿ : ಸುಪ್ರೀಂ ಕೋರ್ಟ್​ನ ಪ್ರಸ್ತುತ ಕಟ್ಟಡವನ್ನು ನೆಲಸಮಗೊಳಿಸದಂತೆ ಹಾಗೂ ಬೇರೆ ಸ್ಥಳದಲ್ಲಿ ಹೊಸ ಕೋರ್ಟ್​ ಕಟ್ಟಡ ನಿರ್ಮಿಸುವಂತೆ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಸುಪ್ರೀಂ ಕೋರ್ಟ್ ಕಟ್ಟಡವು ಭಾರತದ ಸ್ವಾತಂತ್ರ್ಯದ ನಂತರ ನಿರ್ಮಿಸಲಾದ ದೇಶದ ಪ್ರಮುಖ ಕಟ್ಟಡಗಳಲ್ಲಿ ಒಂದಾಗಿದೆ ಮತ್ತು ಪ್ರಸ್ತುತ ಬಾಡಿಗೆ ಆಧಾರದ ಮೇಲೆ ಖಾಸಗಿ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿರುವ ಇತರ ಅನೇಕ ನ್ಯಾಯಾಲಯಗಳು, ನ್ಯಾಯಮಂಡಳಿಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಅಲ್ಲಿ ಸ್ಥಳಾವಕಾಶ ಕಲ್ಪಿಸಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೆ.ಕೆ. ರಮೇಶ್ ಎಂಬುವರು ಈ ಪಿಐಎಲ್ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್​ ಕಟ್ಟಡವನ್ನು ನೆಲಸಮಗೊಳಿಸುವ ಬದಲು ಅದನ್ನು ಹಾಗೆಯೇ ಬಿಟ್ಟು ಬೇರೆ ಉದ್ದೇಶಗಳಿಗಾಗಿ ಬಳಸುವುದು ಸೂಕ್ತ ಎಂದು ವಾದಿಸಿದರು.

"ಪ್ರಸ್ತುತ ಸುಪ್ರೀಂ ಕೋರ್ಟ್ 17 ನ್ಯಾಯಾಲಯ ಕೊಠಡಿಗಳು ಮತ್ತು ಎರಡು ರಿಜಿಸ್ಟ್ರಾರ್ ನ್ಯಾಯಾಲಯ ಕೊಠಡಿಗಳನ್ನು ಹೊಂದಿದೆ. ಕೇಂದ್ರ ಸರ್ಕಾರವು ಸದ್ಯ ಇಡೀ ಕಟ್ಟಡವನ್ನು ನೆಲಸಮಗೊಳಿಸಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ರಿಜಿಸ್ಟ್ರಾರ್ ನ್ಯಾಯಾಲಯ ಕೊಠಡಿಗಳು ಸೇರಿದಂತೆ ಒಟ್ಟು 27 ನ್ಯಾಯಾಲಯ ಕೊಠಡಿಗಳನ್ನು ಹೊಂದಿರುವ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಆದರೆ 10 ವರ್ಷಗಳ ನಂತರ ಇಷ್ಟು ನ್ಯಾಯಾಲಯ ಕೊಠಡಿಗಳು ಯಾವುದಕ್ಕೂ ಸಾಕಾಗುವುದಿಲ್ಲ. ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಆರ್ಥಿಕತೆಯನ್ನು ನೋಡಿದರೆ ಕೇವಲ 27 ನ್ಯಾಯಾಲಯ ಕೊಠಡಿಗಳು ಜನತೆಗೆ ಭಾರಿ ಅನಾನುಕೂಲತೆಗೆ ಕಾರಣವಾಗಬಹುದು" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದಲ್ಲದೇ ಕೇಂದ್ರವು ಸುಪ್ರೀಂ ಕೋರ್ಟ್​ ಕಟ್ಟಡದ ಹೊಸ ವಿನ್ಯಾಸವನ್ನು ಬಿಡುಗಡೆ ಮಾಡಿಲ್ಲ ಮತ್ತು ಹೊಸ ಕಟ್ಟಡ ವಿನ್ಯಾಸದ ಬಗ್ಗೆ ಸಾಮಾನ್ಯ ಜನತೆ ಮತ್ತು ಬಾರ್ ಅಸೋಸಿಯೇಷನ್​ಗಳೊಂದಿಗೆ ಚರ್ಚಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಜನವರಿ 28 ರಂದು, ಸುಪ್ರೀಂ ಕೋರ್ಟ್​ನ ವಜ್ರ ಮಹೋತ್ಸವ ಆಚರಣೆಯಲ್ಲಿ ಉದ್ಘಾಟನಾ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನ್ಯಾಯಾಲಯದ ಸಂಕೀರ್ಣವನ್ನು ವಿಸ್ತರಿಸಲು ಕೇಂದ್ರ ಸರ್ಕಾರ 800 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಘೋಷಿಸಿದ್ದರು. ಸೆಂಟ್ರಲ್ ವಿಸ್ಟಾ ಪ್ರಕರಣದಲ್ಲಿ ಮಾಡಿದಂತೆ ಹೊಸ ಕಟ್ಟಡ ನಿರ್ಮಾಣವನ್ನು ನಿಲ್ಲಿಸಲು ಯಾವುದೇ ಅರ್ಜಿ ಸಲ್ಲಿಕೆಯಾಗುವುದಿಲ್ಲ ಎಂಬುದು ನನ್ನ ಆಶಾಭಾವನೆಯಾಗಿದೆ ಎಂದು ಆಗ ಪ್ರಧಾನಿ ಮೋದಿ ಹೇಳಿದ್ದರು.

ಇದನ್ನೂ ಓದಿ : ದೆಹಲಿ-ವಾರಣಾಸಿ ವಿಮಾನಕ್ಕೆ ಬಾಂಬ್ ಬೆದರಿಕೆ: ತುರ್ತು ನಿರ್ಗಮನ ದ್ವಾರದಿಂದ ಹೊರಬಂದ ಪ್ರಯಾಣಿಕರು! - Bomb Threat To Flight

ABOUT THE AUTHOR

...view details