ನವದೆಹಲಿ:ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಈಗಿರುವಂತೆ ಸ್ಥಿರವಾಗಿ ಮುಂದುವರೆದಲ್ಲಿ ತೈಲ ಮಾರುಕಟ್ಟೆ ಕಂಪನಿಗಳ ಲಾಭದ ಮಾರ್ಜಿನ್ ಉತ್ತಮವಾಗುವುದರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2 ರಿಂದ 3 ರೂಪಾಯಿ ಕಡಿಮೆಯಾಗಬಹುದು ಎಂದು ಜಾಗತಿಕ ಆರ್ಥಿಕ ರೇಟಿಂಗ್ ಏಜೆನ್ಸಿ ಐಸಿಆರ್ಎ ಹೇಳಿದೆ.
ಕಚ್ಚಾ ತೈಲ ಬೆಲೆಗಳ ಇಳಿಕೆಯೊಂದಿಗೆ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ವಾಹನ ಇಂಧನಗಳ ಚಿಲ್ಲರೆ ಮಾರಾಟದ ಮಾರುಕಟ್ಟೆ ಮಾರ್ಜಿನ್ ಇತ್ತೀಚಿನ ವಾರಗಳಲ್ಲಿ ಸುಧಾರಿಸಿದೆ. ಕಚ್ಚಾ ತೈಲ ಬೆಲೆಗಳು ಪ್ರಸ್ತುತ ಮಟ್ಟದಲ್ಲಿ ಸ್ಥಿರವಾಗಿದ್ದರೆ ಚಿಲ್ಲರೆ ಇಂಧನ ಬೆಲೆಗಳನ್ನು ಇಳಿಸಲು ಅವಕಾಶವಿದೆ ಎಂದು ರೇಟಿಂಗ್ ಏಜೆನ್ಸಿ ನಿರೀಕ್ಷಿಸಿದೆ.
"ಸೆಪ್ಟೆಂಬರ್ 2024 ರಲ್ಲಿ (ಸೆಪ್ಟೆಂಬರ್ 17 ರವರೆಗೆ) ಅಂತರರಾಷ್ಟ್ರೀಯ ಕಚ್ಚಾತೈಲ ಬೆಲೆಗಳಿಗೆ ಹೋಲಿಸಿದರೆ ಒಎಂಸಿಗಳ ನಿವ್ವಳ ಆದಾಯವು ಪೆಟ್ರೋಲ್ಗೆ ಲೀಟರ್ಗೆ 15 ರೂ ಮತ್ತು ಡೀಸೆಲ್ ಲೀಟರ್ಗೆ 12 ರೂ ಹೆಚ್ಚಾಗಿದೆ ಎಂದು ಐಸಿಆರ್ಎ ಅಂದಾಜಿಸಿದೆ" ಎಂದು ಐಸಿಆರ್ಎ ಎಸ್ವಿಪಿ ಮತ್ತು ಕಾರ್ಪೊರೇಟ್ ರೇಟಿಂಗ್ಸ್ ಗ್ರೂಪ್ ಹೆಡ್ ಗಿರೀಶ ಕುಮಾರ್ ಕದಮ್ ಹೇಳಿದ್ದಾರೆ.
ಐಸಿಆರ್ಎ ಪ್ರಕಾರ, ಈ ಇಂಧನಗಳ ಚಿಲ್ಲರೆ ಮಾರಾಟ ಬೆಲೆ (ಆರ್ಎಸ್ಪಿ) ಮಾರ್ಚ್ 2024 ರಿಂದ ಬದಲಾಗದೆ ಉಳಿದಿದೆ (ಮಾರ್ಚ್ 15 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್ಗೆ 2 ರೂ.ಗಳನ್ನು ಕಡಿಮೆ ಮಾಡಲಾಗಿತ್ತು) ಮತ್ತು ಕಚ್ಚಾ ತೈಲ ಬೆಲೆಗಳು ಸ್ಥಿರವಾಗಿದ್ದರೆ ಈಗ ಮತ್ತೆ ಈ ಇಂಧನಗಳ ಬೆಲೆಗಳನ್ನು ಲೀಟರ್ಗೆ 2 ರಿಂದ 3 ರೂ.ಗಳಷ್ಟು ಕಡಿಮೆ ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.