ಕರ್ನಾಟಕ

karnataka

ETV Bharat / bharat

ಟ್ರೈನ್​ ಚೈನ್​ ಎಳೆದು ಇಳಿದ ಪ್ರಯಾಣಿಕರ ಮೇಲೆ ಹರಿದ ರೈಲು: 12 ಮಂದಿ ಸಾವು - JALGAON TRAIN ACCIDENT

ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿರುವ ವದಂತಿಯಿಂದ ಗಾಬರಿಗೊಂಡ ಹಲವು ಪ್ರಯಾಣಿಕರು ಚೈನ್​ ಎಳೆದು ಟ್ರೈನ್​​ ನಿಲ್ಲಿಸಿ, ಬೇರೆ ಟ್ರ್ಯಾಕ್​ ಮೇಲೆ ತೆರಳುತ್ತಿದ್ದಾಗ ಕರ್ನಾಟಕ ಎಕ್ಸ್​​​ಪ್ರೆಸ್​ ಹರಿದು ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ.

ಬೆಂಕಿ ಹತ್ತಿದ ವದಂತಿ:​​ ರೈಲಿನಿಂದ ಜಿಗಿದ ಪ್ರಯಾಣಿಕರು: ಮಹರಾಷ್ಟ್ರದ ಜಲಗಾಂವನಲ್ಲಿ ಘಟನೆ
ಬೆಂಕಿ ಹತ್ತಿದ ವದಂತಿ:​​ ರೈಲಿನಿಂದ ಜಿಗಿದ ಪ್ರಯಾಣಿಕರು: ಮಹರಾಷ್ಟ್ರದ ಜಲಗಾಂವನಲ್ಲಿ ಘಟನೆ (ETV Bharat)

By ETV Bharat Karnataka Team

Published : Jan 22, 2025, 6:21 PM IST

Updated : Jan 22, 2025, 6:58 PM IST

ಜಲಗಾಂವ್​ (ಮಹಾರಾಷ್ಟ್ರ):ಉತ್ತರ ಮಹಾರಾಷ್ಟ್ರದ ಜಲ್ಗಾಂವ್​​ನಲ್ಲಿ ಟ್ರೈನ್​​ವೊಂದರಲ್ಲಿ ಬೆಂಕಿ ಹೊತ್ತಿಕೊಂಡ ವದಂತಿ ಹಿನ್ನೆಲೆಯಲ್ಲಿ ರೈಲಿನಿಂದ ಇಳಿದು ಹಳಿಗಳ ಮೇಲೆ ತೆರಳುತ್ತಿದ್ದ ಪ್ರಯಾಣಿಕರ ಮೇಲೆ ಮತ್ತೊಂದು ರೈಲು ಹರಿದ ಪರಿಣಾಮ 12 ಜನ ಪ್ರಯಾಣಿಕರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪಚೋರಾ ನಿಲ್ದಾಣದ ಬಳಿಯ ಮಹೇಜಿ ಮತ್ತು ಪರ್ಧಾಡೆ ನಡುವಣ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಸಂಜೆ 5 ಗಂಟೆ ಸುಮಾರಿಗೆ ಲಕ್ನೋ- ಮುಂಬೈ ಪುಷ್ಪಕ್ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡ ವದಂತಿಯಿಂದಾಗಿ ಯಾರೋ ಚೈನ್ ಎಳೆದಿದ್ದರು. ಇದರಿಂದಾಗಿ ಟ್ರೈನ್​ ನಿಂತಿದ್ದರಿಂದ ಪುಷ್ಪಕ್ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ಕೆಳಗಿಳಿದು ಮತ್ತೊಂದು ಟ್ರ್ಯಾಕ್​ ಮೇಲೆ ತೆರಳುತ್ತಿದ್ದ ವೇಳೆ, ಆ ಹಳಿ ಮೇಲೆ ಎದುರಿನಿಂದ ಬರುತ್ತಿದ್ದ ಬೆಂಗಳೂರು-ದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿದ್ದಾರೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ. ಅಪಘಾತದ ಸ್ಥಳವು ಮುಂಬೈನಿಂದ 400 ಕಿ.ಮೀ ದೂರದಲ್ಲಿದೆ.

ಘಟನೆ ನಡೆದಿದ್ದು ಹೇಗೆ? ಪ್ರಾಥಮಿಕ ಮಾಹಿತಿ ಪ್ರಕಾರ, ಪುಷ್ಪಕ್ ಎಕ್ಸ್‌ಪ್ರೆಸ್‌ನ ಬೋಗಿಯೊಂದರಲ್ಲಿ ಹಾಟ್ ಆಕ್ಸಲ್ ಅಥವಾ ಬ್ರೇಕ್-ಬೈಂಡಿಂಗ್ (ಜಾಮಿಂಗ್) ನಿಂದಾಗಿ ಬೆಂಕಿ ಕಿಡಿಗಳು ಕಾಣಿಸಿಕೊಂಡಿದ್ದವು. ಇದರಿಂದ ಕೆಲವು ಪ್ರಯಾಣಿಕರು ಗಾಬರಿಗೊಂಡು ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ಇನ್ನೂ ಕೆಲವರು ರೈಲಿನಿಂದ ಕೆಳಕ್ಕೆ ಜಿಗಿದಿದ್ದಾರೆ. ಅದೇ ಸಮಯದಲ್ಲಿ ಮತ್ತೊಂದು ಹಳಿಯಲ್ಲಿ ಕರ್ನಾಟಕ ಎಕ್ಸ್‌ಪ್ರೆಸ್ ಹಾದುಹೋಗುತ್ತಿತ್ತು ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

"ಜಲ್ಗಾಂವ್ ಜಿಲ್ಲೆಯ ಪಚೋರಾ ಬಳಿ ನಡೆದ ರೈಲು ದುರಂತ ಅತ್ಯಂತ ದುರದೃಷ್ಟಕರ. ಸಚಿವ ಗಿರೀಶ್ ಮಹಾಜನ್ ಮತ್ತು ಜಿಲ್ಲಾಡಳಿತ ಸ್ಥಳಕ್ಕೆ ತೆರಳಿದೆ. ರೈಲ್ವೆ ಆಡಳಿತದ ಸಮನ್ವಯದಿಂದ ಗಾಯಾಳುಗಳ ಚಿಕಿತ್ಸೆಗೆ ತಕ್ಷಣದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. 8 ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗಿದೆ. ಜೊತೆಗೆ ಹತ್ತಿರದ ಆಸ್ಪತ್ರೆಗಳಲ್ಲಿ ಕೂಡ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ರೈಲು ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರ ಸಂಬಂಧಿಕರಿಗೆ ತಲಾ 5 ಲಕ್ಷ ರೂ.ಗಳ ಆರ್ಥಿಕ ಸಹಾಯ ನೀಡುವುದಾಗಿ" ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಘಟನೆ ಬಗ್ಗೆ ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲು ನಿರ್ದೇಶಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ ಸಚಿವರು ಘಟನೆ ಬಗ್ಗೆ ಹೇಳಿದ್ದಿಷ್ಟು:ಘಟನೆಯ ಮಾಹಿತಿ ಸಿಕ್ಕ ತಕ್ಷಣ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದು, ಅವರು ಸ್ಪಾಟ್​ ಗೆ ತಲುಪಿದ ತಕ್ಷಣ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಜಲಗಾಂವ್‌ನ ಉಸ್ತುವಾರಿ ಸಚಿವರೂ ಆಗಿರುವ ಮಹಾರಾಷ್ಟ್ರದ ಸಚಿವ ಗುಲಾಬ್​ ರಾವ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ:ಅಫ್ಜಲ್​ಗಂಜ್​-ಬೀದರ್​ ಗುಂಡಿನ ದಾಳಿ ಪ್ರಕರಣ; ವಿವಿಧ ರಾಜ್ಯಗಳಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರ ತಲಾಶ್​

Last Updated : Jan 22, 2025, 6:58 PM IST

ABOUT THE AUTHOR

...view details