ನಾರಾಯಣಪುರ (ಛತ್ತೀಸ್ಗಢ):ಛತ್ತೀಸ್ಗಢದಲ್ಲಿ ಮಾವೋವಾದಿಗಳು ಭೂಮಿಯಲ್ಲಿ ಅಡಗಿಸಿ ಇಟ್ಟಿದ್ದ ಸುಧಾರಿತ ಸ್ಫೋಟಕ ವಸ್ತು (ಐಇಡಿ) ಸಿಡಿದು ಇಬ್ಬರು ಐಟಿಬಿಪಿ ಯೋಧರು ಹುತಾತ್ಮರಾಗಿದ್ದಾರೆ. ಯೋಧರಿಬ್ಬರು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದವರಾಗಿದ್ದಾರೆ.
ನಕ್ಸಲೀಯರು ಅಡಗಿರುವ ಬಗ್ಗೆ ಶೋಧ ಕಾರ್ಯಾಚರಣೆ ಮಾಡುತ್ತಿದ್ದಾಗ ನಾರಾಯಣಪುರ ಜಿಲ್ಲೆಯ ಅಬುಜ್ಮದ್‌ನ ಕೊಡಲಿಯಾರ್ ಗ್ರಾಮದ ಬಳಿಯ ಅರಣ್ಯದಲ್ಲಿ ಇಟ್ಟಿದ್ದ ಬಾಂಬ್ ಸ್ಫೋಟಗೊಂಡಿದೆ. ದುರಂತದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ ಯೋಧರಾದ ಅಮರ್ ಪವಾರ್ ಮತ್ತು ರಾಜೇಶ್ ಸ್ಥಳದಲ್ಲೇ ಹುತಾತ್ಮರಾದರು. ಜೊತೆಗೆ ಇನ್ನಿಬ್ಬರು ಯೋಧರು ಗಾಯಗೊಂಡಿದ್ದಾರೆ. ಗಾಯಾಳು ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
36 ವರ್ಷದ ಹುತಾತ್ಮ ಯೋಧ ಅಮರ್ ಪವಾರ್ ಅವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಿವಾಸಿಯಾಗಿದ್ದರೆ, ಇನ್ನೊಬ್ಬ ಹುತಾತ್ಮ ಯೋಧ ರಾಜೇಶ್ (36) ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರಾಗಿದ್ದಾರೆ. ಇಬ್ಬರೂ ಐಟಿಬಿಪಿಯ 53ನೇ ಬೆಟಾಲಿಯನ್‌ನಲ್ಲಿ ನಿಯೋಜಿತರಾಗಿದ್ದರು.