ಶ್ರೀನಗರ(ಜಮ್ಮು ಕಾಶ್ಮೀರ):ದಶಕದ ಬಳಿಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳು ಪ್ರಚಾರ ಶುರು ಮಾಡಿವೆ. ಕಣಿವೆಯಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಈ ಮಧ್ಯೆ ಹೆಚ್ಚಿದ್ದು, ಮತದಾನದ ವೇಳೆ ದೊಡ್ಡ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಕಾಶ್ಮೀರ ಕಣಿವೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಸುಮಾರು 300 ಅರೆಸೇನಾ ಪಡೆಗಳನ್ನು ನಿಯೋಜಿಸಿದೆ. ಅವುಗಳನ್ನು ಶ್ರೀನಗರ, ಹಂದ್ವಾರ, ಗಂದರ್‌ಬಾಲ್, ಬುದ್ಗಾಮ್, ಕುಪ್ವಾರಾ, ಬಾರಾಮುಲ್ಲಾ, ಬಂಡಿಪೋರಾ, ಅನಂತನಾಗ್, ಶೋಪಿಯಾನ್, ಪುಲ್ವಾಮಾ, ಅವಂತಿಪೋರಾ ಮತ್ತು ಕುಲ್ಗಾಮ್‌ನಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಯಾವುದೇ ಅಡೆತಡೆ ಇಲ್ಲದೇ, ಸುಗಮವಾಗಿ ನಡೆಯಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್ಎಫ್), ಸಹಸ್ತ್ರ ಸೀಮಾ ಬಾಲ್ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ಈ ತುಕಡಿಗಳು ಹೊಂದಿವೆ.
ಎಲ್ಲೆಲ್ಲಿ ಎಷ್ಟು ತುಕಡಿಗಳ ನಿಯೋಜನೆ?:ಉಗ್ರ ದಾಳಿಗೆ ಕುಖ್ಯಾತಿಯಾಗಿರುವ ಶ್ರೀನಗರದಲ್ಲಿ ಗರಿಷ್ಠ ಸಂಖ್ಯೆಯ 55 ತಂಡಗಳನ್ನು ನಿಯೋಜಿಸಲಾಗಿದೆ. ಅನಂತನಾಗ್ ಜಿಲ್ಲೆಯಲ್ಲಿ 50, ಕುಲ್ಗಾಮ್‌ನಲ್ಲಿ 31, ಬುದ್ಗಾಮ್, ಪುಲ್ವಾಮಾ ಮತ್ತು ಅವಂತಿಪೋರಾ ಜಿಲ್ಲೆಗಳಲ್ಲಿ ತಲಾ 24, ಶೋಪಿಯಾನ್ನಲ್ಲಿ 22, ಕುಪ್ವಾರ 20, ಬಾರಾಮುಲ್ಲಾ 17, ಹಂದ್ವಾರ 15, ಬಂಡಿಪೋರಾ 13, ಮತ್ತು ಗಂದರ್ಬಲ್ (3) ತುಕಡಿಗಳನ್ನು ಭದ್ರತೆಗೆ ಇಡಲಾಗಿದೆ.