ಪನ್ನಾ (ಮಧ್ಯಪ್ರದೇಶ):ಇಲ್ಲಿನ ಪನ್ನಾ ವಜ್ರದ ಗಣಿಯು ಹಲವು ಜನರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿದೆ. ಗಣಿಗಳಲ್ಲಿ ನಿಜವಾದ ವಜ್ರಗಳು ದೊರೆತು ರಾತ್ರೋರಾತ್ರಿ ಸಿರಿವಂತರಾಗಿದ್ದಾರೆ. ಅಂಥದ್ದೇ ಅದೃಷ್ಟ ಕಾರ್ಮಿಕ ರಾಜು ಎಂಬಾತನಿಗೆ ಒಲಿದಿದೆ. ಈತ 250 ರೂಪಾಯಿ ಪಾವತಿಸಿ ಗಣಿಗಾರಿಕೆ ಮಾಡಿದ್ದ. ಅಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಡೈಮಂಡ್ ಸಿಕ್ಕಿದ್ದು, ಕುಚೇಲನಾಗಿದ್ದ ಆತ ಕುಬೇರನಾಗಿದ್ದಾನೆ.
ಜುಲೈ 18 ರಂದು ರಾಜು ಎಂಬಾತನಿಗೆ ವಜ್ರ ಸಿಕ್ಕಿದೆ. ಇದನ್ನು ಸಂಬಂಧಿಸಿದ ಕಚೇರಿಗೆ ನೀಡಿದ್ದಾನೆ. ಅಧಿಕಾರಿಗಳು ಅದನ್ನು ಪರಿಶೀಲಿಸಿದ್ದು, 19 ಕ್ಯಾರೆಟ್, 22 ಸೆಂಟ್ಸ್ ದೊಡ್ಡ ವಜ್ರವನ್ನು ಹರಾಜಿಗೆ ಹಾಕಿದ್ದಾರೆ. ಅದು ಮೂಲವಾಗಿ 80 ಲಕ್ಷ ರೂಪಾಯಿ ಹೊಂದಿದ್ದರೂ, 1 ಕೋಟಿಗೆ ಬಿಕರಿಯಾಗಿದೆ. ಡೈಮಂಡ್ ಕಚೇರಿ ಅಧಿಕಾರಿಗಳು ಕಾರ್ಮಿಕನನ್ನು ಅಭಿನಂದಿಸಿ ಹಣವನ್ನು ಆತನ ಖಾತೆಗೆ ಜಮಾ ಮಾಡಿದ್ದಾರೆ.
ಹಣದಲ್ಲಿ ಭೂಮಿ ಖರೀದಿಸುವೆ;ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿರುವ ಕಾರ್ಮಿಕ ರಾಜು, 19 ಕ್ಯಾರೆಟ್ನ 22 ಸೆಂಟ್ಸ್ ದೊಡ್ಡದಾದ ವಜ್ರ ನನಗೆ ಸಿಕ್ಕಿತ್ತು. 250 ರೂಪಾಯಿಯಲ್ಲಿ ಗಣಿಗಾರಿಕೆಗೆ ಅವಕಾಶ ಪಡೆದಿದ್ದೆ. ಅದೃಷ್ಟವಶಾತ್ ನನಗೆ ಡೈಮಂಡ್ ಸಿಕ್ಕು, ನನ್ನೆಲ್ಲಾ ಕಷ್ಟಗಳಿಗೆ ಪರಿಹಾರವೂ ದಕ್ಕಿದೆ. ಇದು ನನಗೆ ತುಂಬಾ ಸಂತೋಷ ತಂದಿದೆ. ಬಂದ ಹಣದಲ್ಲಿ ಮಕ್ಕಳನ್ನು ಓದಿಸುತ್ತೇನೆ. ಭೂಮಿಯನ್ನು ಖರೀದಿಸುತ್ತೇನೆ. ಕೆಲವೊಮ್ಮೆ ವರ್ಷಗಟ್ಟಲೆ ಇಲ್ಲಿ ವಜ್ರ ಸಿಗುವುದಿಲ್ಲ. ಅದೃಷ್ಟ ಒಲಿದರೆ ಎರಡೇ ದಿನದಲ್ಲಿ ವಜ್ರ ಸಿಗುತ್ತದೆ. ಅಂತಹ ಅದೃಷ್ಟ ನನ್ನದಾಗಿದೆ ಎಂದು ಹೇಳಿದರು.