ಶ್ರೀನಗರ: ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಯಶಸ್ವಿಯಾಗಿ ಮೂರು ಹಂತದ ವಿಧಾನಸಭೆ ಚುನಾವಣೆ ನಡೆದಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಚುನಾವಣೆಗೆ ಕಣಿವೆ ನಾಡು ಸಿದ್ದವಾಗಿದೆ. ಈ ವರ್ಷದೊಳಗೆ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಾಗಲೇ ಸಿದ್ದತೆ ನಡೆಯುತ್ತಿದೆ. ವಿಧಾನಸಭಾ ಚುನಾವಣೆ ಸರಾಗ ಮತ್ತು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಸದ್ಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಇದನ್ನು ಮುಂದಿನ ಪಂಚಾಯತ್ ಮತ್ತು ನಗರಾಡಳಿತ ಚುನಾವಣೆ ಮುಗಿಯುವವರೆಗೂ ಮುಂದುವರೆಸುವ ಉದ್ದೇಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಶ್ರೀನಗರದ ನಗರ ಆಡಳಿತದ ಅಧಿಕಾರ ಕಳೆದ ನವೆಂಬರ್ನಲ್ಲಿಯೇ ಮುಗಿದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಶೀಘ್ರದಲ್ಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದೆ ಎಂಬ ಸುಳಿವು ನೀಡಿದ್ದಾರೆ. ಹಲವು ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವ ಈ ಚುನಾವಣೆಯನ್ನು ಆದ್ಯತೆಯ ಮೇಲೆ ಮುಗಿಸುವ ಜವಾಬ್ದಾರಿ ಕೂಡ ಸರ್ಕಾರ ಮೇಲಿದೆ.