ಹೈದರಾಬಾದ್:ಬಂಗಾಳಕೊಲ್ಲಿ ಸಮುದ್ರದಲ್ಲಿರುವ ರಾಮೇಶ್ವರಂ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ನೂತನ ಪಂಬನ್ ಸೇತುವೆ 'ಆಧುನಿಕ ಎಂಜಿನಿಯರಿಂಗ್ನ ಅದ್ಭುತ'. ಅತ್ಯಾಧುನಿಕ ತಂತ್ರಜ್ಞಾನ ಇಲ್ಲಿ ಮೈದಾಳಿದೆ ಎಂದು ಯೋಜನೆಯ ಉಸ್ತುವಾರಿ ವಹಿಸಿರುವ ತೆಲುಗು ಭಾಷಿಕ ಎಂಜಿನಿಯರ್ ನಡುಪುರ್ ವೆಂಕಟ ಚಕ್ರಧರ್ ಅವರು ಹೊಗಳಿದ್ದಾರೆ.
ಈಟಿವಿ ಭಾರತದ ಜೊತೆಗೆ ಪಂಬನ್ ಸೇತುವೆಯ ಬಗ್ಗೆ ಮಾತನಾಡಿದ ಅವರು, ಇದು ಭಾರತದ ಮೊದಲ ವರ್ಟಿಕಲ್ - ಲಿಫ್ಟ್ ರೈಲ್ವೆ ಸೇತುವೆಯಾಗಿದೆ. ಕೊನೆಯ ಭೂಪ್ರದೇಶವಾದ ತಮಿಳುನಾಡಿನ ಮಂಟಪದಿಂದ ಬಂಗಾಳ ಕೊಲ್ಲಿಯಲ್ಲಿರುವ ರಾಮೇಶ್ವರಂ ದ್ವೀಪಕ್ಕೆ ಸಂಪರ್ಕ ಕಲ್ಪಿಸುತ್ತದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇದು ವಿಶೇಷ ಕೊಡುಗೆ ಎಂದು ಹೇಳಿದ್ದಾರೆ.
ಲಿಫ್ಟ್ ಸ್ಪ್ಯಾನ್ ವಿಶೇಷ:2.08 ಕಿಮೀ ಉದ್ದದ ಈ ಸೇತುವೆಯ ವಿಶೇಷವೆಂದರೆ ಲಿಫ್ಟ್ ಸ್ಪ್ಯಾನ್. ಇದು 72.5 ಮೀಟರ್ ಉದ್ದ ಮತ್ತು 660 ಟನ್ ತೂಕವಿದೆ. ಇದನ್ನು ಮೇಲೆತ್ತ್ತುವ ಮೂಲಕ ಸಮುದ್ರದಲ್ಲಿ ತೆರಳುವ ಹಡಗುಗಳಿಗೆ ಕೆಳಗೆ ಹಾದುಹೋಗಲು ದಾರಿ ಮಾಡಿಕೊಡುತ್ತದೆ. ಇದು ಆಟೋಮೇಟಿಕ್ ತಂತ್ರಜ್ಞಾನವನ್ನು ಹೊಂದಿದೆ. ಬಳಿಕ ಅದನ್ನು ಮತ್ತೆ ರೈಲ್ವೆ ಟ್ರ್ಯಾಕ್ಗೆ ಅಳವಡಿಸಿ ರೈಲು ಸಂಚಾರ ನಡೆಸಬಹುದು. ಇದು ಹೆಚ್ಚಿನ ಭಾರವನ್ನು ತಡೆಯುವ ಶಕ್ತಿ ಹೊಂದಿದೆ. ಈ ಲಿಫ್ಟ್ ನಿರ್ಮಾಣಕ್ಕೆ ಐದು ತಿಂಗಳು ಸಮಯ ವ್ಯಯಿಸಲಾಗಿದೆ. ಭೂಭಾಗದಿಂದ 600 ಮೀಟರ್ ದೂರದಲ್ಲಿ ಅದನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತುಕ್ಕು ತಡೆಗಟ್ಟುವಿಕೆ:ಪಂಬನ್ ಸೇತುವೆ ನೀರಿನಲ್ಲಿ ನಿರ್ಮಾಣವಾದ್ದರಿಂದ ತುಕ್ಕು ಅದರ ಪಿಲ್ಲರ್ಗಳು ತುಕ್ಕು ಹಿಡಿಯದಂತೆ, ಪಾಲಿಸಿಲೋಕ್ಸೇನ್ ಬಣ್ಣವನ್ನು ಮೂರು ಪದರಗಳಲ್ಲಿ ಬಳಸಲಾಗಿದೆ. ಇದರಿಂದ ಉಕ್ಕು ತುಕ್ಕು ಹಿಡಿಯದಂತೆ ಕಾಪಾಡುತ್ತದೆ. ಸೇತುವೆಯು 100 ವರ್ಷಗಳವರೆಗೆ ಬಾಳಿಕೆ ಬರುತ್ತದೆ ಎಂದು ವೆಂಕಟ ಚಕ್ರಧರ್ ಮಾಹಿತಿ ಹಂಚಿಕೊಂಡಿದ್ದಾರೆ.