ಜಮ್ಮು ಮತ್ತು ಕಾಶ್ಮೀರ:ಕಣಿವೆ ನಾಡಿನಕಥುವಾ ಜಿಲ್ಲೆಯ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ಪ್ರದೇಶವಾದ ರಾಜ್‌ಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾಕಿಸ್ತಾನಿ ಬಲೂನ್ ಪತ್ತೆಯಾಗಿದೆ. ಬಲೂನ್ ಕೆಲವು ಹೊತ್ತು ಸ್ಥಳೀಯರನ್ನು ಆತಂಕಕ್ಕೆ ತಳ್ಳಿತ್ತು.
"ಪಿಐಎ" (ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್) ಎಂದು ಬರೆದಿರುವ ಬಲೂನ್ ಇದಾಗಿದ್ದು, ಸ್ಥಳೀಯ ಠಾಣಾ ಪೊಲೀಸರು ಬಲೂನ್ ಅನ್ನು ವಶಪಡಿಸಿಕೊಂಡಿದ್ದಾರೆ. ರಾಜ್‌ಬಾಗ್ ಸಮೀಪದ ಲಾಹ್ರಿ ಎಂಬ ಗ್ರಾಮದ ಹೊಲವೊಂದರಲ್ಲಿ ಈ ಬಲೂನ್ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಈ ಬಲೂನ್ ಭಾರತದ ಗಡಿ ಪ್ರದೇಶದೊಳಗೆ ಬಿದ್ದಿರುವುದನ್ನು ಗಮನಿಸಿದ್ದ ಸ್ಥಳೀಯರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಬಲೂನ್ ಅನ್ನು ವಶಕ್ಕೆ ಪಡೆದು ಪ್ರಾಥಮಿಕ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಬಲೂನ್‌ನಲ್ಲಿ ಯಾವುದೇ ರೀತಿಯ ಸ್ಫೋಟಕವಾಗಲಿ, ಮಾದಕ ವಸ್ತುಗಳಾಗಲಿ ಪತ್ತೆಯಾಗಿಲ್ಲ. ಆದರೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಉಗ್ರರ ಅಡಗುತಾಣ ಪತ್ತೆ:ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾರತೀಯ ಸೇನೆಯು ಉಗ್ರರ ಅಡಗುತಾಣವನ್ನು ಪತ್ತೆಹಚ್ಚಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡಿದೆ. ರಾಷ್ಟ್ರೀಯ ರೈಫಲ್ಸ್‌ನ ಪಡೆಗಳು ರಿಯಾಸಿ ಜಿಲ್ಲೆಯ ಮಹೋರ್ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಉಗ್ರರ ಅಡಗುತಾಣಗಳು ಪತ್ತೆಯಾಗಿವೆ. ಅಡಗುತಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಕೂಡ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಒಂದು ಎಕೆ ಅಸಾಲ್ಟ್ ರೈಫಲ್, 400ಕ್ಕೂ ಹೆಚ್ಚು ಸುತ್ತುಗಳಿಂದ ತುಂಬಿದ ಮೂರು ಮ್ಯಾಗಜೀನ್‌ಗಳು, ಎರಡು ಪಿಸ್ತೂಲ್‌ಗಳು, 14 ಸುತ್ತಿನ ಎರಡು ಮ್ಯಾಗಜೀನ್‌ಗಳು ಮತ್ತು ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಪೂಂಚ್: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಒಳ ನುಸುಳುಕೋರನ ಬಂಧನ