ಕರ್ನಾಟಕ

karnataka

ETV Bharat / bharat

ಮೋದಿ 3.0 ಸರ್ಕಾರ ರಚನೆ: ಕೊನೆಗೂ ಭಾರತದ ಪ್ರಧಾನಿಗೆ ಶುಭಕೋರಿದ ಪಾಕಿಸ್ತಾನ - Pak wishes PM Modi

ಭಾರತದ ಪ್ರಧಾನಿಯಾಗಿ ಮೂರನೇ ಭಾರಿಗೆ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಶುಭಾಶಯ ಕೋರಿದೆ.

ಭಾರತದ ಪ್ರಧಾನಿಗೆ ಶುಭಕೋರಿದ ಪಾಕಿಸ್ತಾನ
ಭಾರತದ ಪ್ರಧಾನಿಗೆ ಶುಭಕೋರಿದ ಪಾಕಿಸ್ತಾನ (ETV Bharat)

By PTI

Published : Jun 10, 2024, 7:37 PM IST

ಇಸ್ಲಾಮಾಬಾದ್ (ಪಾಕಿಸ್ತಾನ):ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಕೊನೆಗೂ ಶುಭಾಶಯ ಕೋರಿದೆ. ಆ ದೇಶದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೋಮವಾರ ಶುಭ ಹಾರೈಸಿದ್ದಾರೆ.

18ನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್​ಡಿಎ) ಗೆಲುವು ಸಾಧಿಸಿದ ಬಳಿಕ ಅದರ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವದ ಹಲವು ರಾಷ್ಟ್ರಗಳ ನಾಯಕರು ಶುಭಾಶಯ ಕೋರಿದ್ದರು. ನೆರೆಹೊರೆಯ ರಾಷ್ಟ್ರಗಳು ಕೂಡ ಅಭಿನಂದನೆ ಹಂಚಿಕೊಂಡಿದ್ದರು. ಆದರೆ, ಈವರೆಗೆ ಪಾಕಿಸ್ತಾನ ಮಾತ್ರ ತುಟಿ ಬಿಚ್ಚಿರಲಿಲ್ಲ.

ಭಾನುವಾರ (ಜೂನ್​ 9) ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಸತತ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. ಜೊತೆಗೆ 71 ಸಚಿವರೂ ಪ್ರತಿಜ್ಞಾವಿಧಿ ಪಡೆದುಕೊಂಡರು. ಅದ್ಧೂರಿ ಕಾರ್ಯಕ್ರಮಕ್ಕೆ ನೆರೆಹೊರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾ, ಮಾರಿಷಸ್​, ಮಾಲ್ಡೀವ್ಸ್​, ಭೂತಾನ್​, ನೇಪಾಳ, ಸೀಶೆಲ್ಸ್​ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಲಾಗಿತ್ತು.

ಪಾಕ್​, ಚೀನಾಗಿಲ್ಲ ಕರೆಯೋಲೆ:ಭಾರತದ ನೆರೆ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಕ್ಕೆ ಮಾತ್ರ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರಲಿಲ್ಲ. ಎರಡೂ ರಾಷ್ಟ್ರಗಳು ದೇಶದ ವಿರುದ್ಧ ಕುತಂತ್ರಗಳನ್ನು ಎಣೆಯುವ ಕಾರಣಕ್ಕಾಗಿ ಅವುಗಳಿಗೆ ಆಹ್ವಾನ ನೀಡಿರಲಿಲ್ಲ. ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳು ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಗೆಲುವು ಸಾಧಿಸಿದ್ದರೂ, ಶುಭಾಶಯಗಳನ್ನು ತಿಳಿಸಿರಲಿಲ್ಲ.

ಇದೀಗ ಪಾಕಿಸ್ತಾನ ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದೆ. ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ಎಕ್ಸ್​ ಖಾತೆಯಲ್ಲಿ "ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ.

ಹಾಜರಿದ್ದ ವಿದೇಶಿ ಗಣ್ಯರು:ಭಾರತದ ಜೊತೆ ತಿಕ್ಕಾಟ ನಡೆಸಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೆ ಮತ್ತು ಸೀಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್ ಅವರು ಭಾಗವಹಿಸಿದ್ದರು.

ಇದನ್ನೂ ಓದಿ:ಸತತ ಮೂರನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಪ್ರಧಾನಿ ಮೋದಿಗೆ ವಿದೇಶಿ ಗಣ್ಯರಿಂದ ಅಭಿನಂದನೆಗಳ ಮಹಾಪೂರ - Congratulations to PM Modi from dignitaries

ABOUT THE AUTHOR

...view details