ನವದೆಹಲಿ: ಬೇಟಿ ಬಚಾವೋ ಬೇಟಿ ಪಢಾವೋ (ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ) ಯೋಜನೆಗೆ 10 ವರ್ಷ ತುಂಬಿದ್ದು, ಲಿಂಗ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಅವರ ಕನಸು ಸಾಧಿಸುವ ಅವಕಾಶಗಳನ್ನು ನೀಡುವ ಉತ್ತಮ ವಾತಾವರಣವನ್ನು ನಿರ್ಮಿಸಲಾಗಿದೆ ಎಂದರು.
2015ರ ಜನವರಿ 22ರಂದು ಹರಿಯಾಣದ ಪಾಣಿಪತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗೆ ಚಾಲನೆ ನೀಡಿದ್ದರು. ಹೆಣ್ಣುಮಕ್ಕಳ ಸಂಖ್ಯೆ ಕುಸಿತದ ಜೊತೆಗೆ ಮಹಿಳೆಯರ ಜೀವನ ಚಕ್ರ ನಿರಂತರತೆಯ ಮಹಿಳಾ ಸಬಲೀಕರಣವನ್ನು ಈ ಯೋಜನೆ ಮೂಲಕ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶ ಹೊಂದಲಾಗಿತ್ತು.
ಈ ಯೋಜನೆಗೆ ದಶಕದ ಸಂಭ್ರಮ ತುಂಬಿದ ಹಿನ್ನೆಲೆ ಈ ಸಂಬಂಧ ಸಂತಸ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಇಂದು ನಾವು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ 10 ವರ್ಷ ಪೂರೈಸಿದ ಮೈಲಿಗಲ್ಲಿನಲ್ಲಿದ್ದೇವೆ. ಕಳೆದೊಂದು ದಶಕದಿಂದ ಎಲ್ಲಾ ಹಂತದ ಜನರು ಇದರಲ್ಲಿ ಭಾಗಿಯಾಗುವ ಮೂಲಕ ಈ ಯೋಜನೆ ಜನರಿಂದ ಚಾಲಿತ ಉಪಕ್ರಮವಾಗಿ ಪರಿವರ್ತಕವಾಗಿದೆ.
ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯು ಲಿಂಗ ತಾರತಮ್ಯದಿಂದ ಹೊರ ಬರುವ ಒಂದು ಅಸ್ತ್ರದ ಜೊತೆಗೆ ಇದು ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಅವರ ಕನಸು ಸಾಧಿಸುವ ಅವಕಾಶ ಸೃಷ್ಟಿಸುವ ಉತ್ತಮ ಪರಿಸರದ ಖಚಿತತೆಯನ್ನು ನೀಡುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಕಳೆದೊಂದು ದಶಕದಿಂದ ಈ ಯೋಜನೆ ಅದ್ಭುತ ಸಾಧನೆ ತೋರುವಲ್ಲಿ ಭಾಗಿಯಾದ ಅನೇಕ ಸಮುದಾಯಗಳ ಸೇವಾ ಸಂಘಟನೆ ಮತ್ತು ಜನರ ಸಮರ್ಪಣಾ ಪ್ರಯತ್ನಕ್ಕೆ ಧನ್ಯವಾದಗಳು ಎಂದು ಅವರು ಎಕ್ಸ್ನಲ್ಲಿ ತಿಳಿಸಿದ್ದಾರೆ.